ಬೆಂಗಳೂರು: ಬಿಜೆಪಿಯ ಕೆಲವರ ದುರಹಂಕಾರದಿಂದ ಬಹಳ ಜನ ಬೇಸತ್ತಿದ್ದಾರೆ. ಹಲವು ಮುಖಂಡರು ಪಕ್ಷದಲ್ಲಿ ಮಾತನಾಡಲು ಭಯಪಡುತ್ತಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೇನೆ ಎಂದು ಎಲ್ಲೂ ಹೇಳಿಲ್ಲ ಎಂದು ಸ್ವಪಕ್ಷದ ನಾಯಕರ ವಿರುದ್ಧ ಮತ್ತೆ ರೇಣುಕಾಚಾರ್ಯ ವಾಗ್ದಾಳಿ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಪಕ್ಷದವರ ವಿರುದ್ಧವೇ ಹರಿಹಾಯ್ದರು. ಪಕ್ಷ ಸೋತ ನಂತರ ಎಲ್ಲರನ್ನೂ ಕರೆದು ಮಾತಾಡಿಸಬೇಕು. ಯಡಿಯೂರಪ್ಪ ಹಿಂದೆಲ್ಲ ಆ ಕೆಲಸ ಮಾಡಿದ್ರು. ಆದರೆ ಬಿಜೆಪಿಯಲ್ಲಿ ಕೆಲವರ ದುರಹಂಕಾರದಿಂದ ಬಹಳ ಜನ ಬೇಸತ್ತು ಹೋಗಿದ್ದಾರೆ ಎಂದು ಕಿಡಿಕಾರಿದರು.
ಪಕ್ಷ ಬಿಡ್ತಾರೆಂದು ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಯಾರೂ ಟಾಸ್ಕ್ ಕೊಟ್ಟಿಲ್ಲ, ನನಗೂ ಪ್ರಬುದ್ಧತೆ, ಜ್ಞಾನ ಇದೆ. ನಾನು ಚಾಕೊಲೇಟ್, ಪೆಪ್ಪರ್ಮೆಂಟ್ ತಿಂದುಕೊಂಡು ಬಂದಿಲ್ಲ. ನಮ್ಮನ್ನು ಕರೆದು ಮಾತನಾಡಿಲ್ಲ, ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಸ್ವಪಕ್ಷದ ನಾಯಕರ ವಿರುದ್ಧ ಮತ್ತೆ ರೇಣುಕಾಚಾರ್ಯ ವಾಗ್ದಾಳಿ ಮಾಡಿದ್ದಾರೆ.
ರಾಜಕೀಯದಲ್ಲಿ ಗಾಡ್ ಫಾದರ್ ಬೇಕು. ಯಡಿಯೂರಪ್ಪ ಅವರಿಗೆ ಆ ಸಾಮರ್ಥ್ಯ ಇತ್ತು. ಯಡಿಯೂರಪ್ಪ (BS Yediyurappa) ಅವರ ನಾಯಕತ್ವ ಪಕ್ಷ ಗಟ್ಟಿಗೊಳಿಸಿದೆ. ಈಗಿನ ಪರಿಸ್ಥಿತಿಗೆ ಈಗಾಗಲೇ ಕೆಲವರು ಪಕ್ಷದಿಂದ ಹೊರಗೆ ಹೋಗಿದ್ದಾರೆ. ಅಭದ್ರತೆಯಿಂದ ಯಾರು ಬೇಕಾದರೂ ಪಕ್ಷ ಬಿಟ್ ಹೋಗಬಹುದು. ಮೋದಿಯವ್ರು ಯಡಿಯೂರಪ್ಪ ಅವರನ್ನು ಕಡೆಗಣಿಸಿಲ್ಲ. ಮಧ್ಯದಲ್ಲಿ ಇರೋರು ಕೆಲವರು ಯಡಿಯೂರಪ್ಪ ಅವರನ್ನು ಕಡೆಗಣಿಸ್ತಿದ್ದಾರೆ ಎಂದರು.