3 ದಶಕಗಳ ಕಾಲ ನಟಿ ಹಾಗೂ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಅಪರ್ಣಾ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ. ಸದ್ಯ ಬನಶಂಕರಿಯ ಅವರ ನಿವಾಸದಲ್ಲಿ ಪಾರ್ಥೀವ ಶರೀರದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ವೇಳೆ ಸಾಕಷ್ಟು ಮಂದಿ ಗಣ್ಯರು ಅಪರ್ಣಾ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಇದೇ ವೇಳೆ ಖ್ಯಾತ ನಟ ಮಂಡ್ಯ ರಮೇಶ್ ಅಪರ್ಣಾ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಕನ್ನಡ ಅಂದರೆ ಅಪರ್ಣ ಅಪರ್ಣಾ ಅಂದರೆ ಕನ್ನಡ ಅಂತ ಮಾತಿದೆ. ಅವರ ಕನ್ನಡ ಪ್ರೀತಿ ಮಾಡಿದ ದೊಡ್ಡ ಜನ ಸಮೂಹವಿದೆ ಎಂಬುದು ಸೋಷಿಯಲ್ ಮೀಡಿಯಾದಲ್ಲಿ ಗೊತ್ತಾಗುತ್ತದೆ. 5 ವರ್ಷ ಮಜಾ ಟಾಕೀಸ್ ಮೂಲಕ ಇವರ ಜೊತೆ ಒಡನಾಟ ನಮ್ಮದು. ಎಲ್ಲರನ್ನೂ ಅತೀ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಅಪರ್ಣಾ. ಇಷ್ಟು ಬೇಗ ಸಾವು ಪಟ್ ಅಂತ ಬರುತ್ತೆ ಅಂತ ಗೊತ್ತಿರಲಿಲ್ಲ ಎಂದು ಮಂಡ್ಯ ರಮೇಶ್ ಭಾವುಕರಾಗಿದ್ದಾರೆ.
ಶ್ರೇಷ್ಠವಾದ ಶುದ್ಧ ಕನ್ನಡದ ಚೆಂದದ, ಮನುಷ್ಯತ್ವ ಗುಣಗಳನ್ನ ಮರೆಯದ ನಟಿಯಾಗಿದ್ದರು. ಮಾತೃತ್ವದ ಹೆಣ್ಣು ಮಗು ಅಪರ್ಣಾ ಎಂದಿದ್ದಾರೆ. ಆರೋಗ್ಯ ಸರಿಯಿಲ್ಲ ಅನ್ನೋದಷ್ಟೇ ಗೊತ್ತಿತ್ತು. ಆದರೆ ಇಷ್ಟು ಗಂಭೀರ ಪರಿಸ್ಥಿತಿ ಇದೆ ಎಂದು ಗೊತ್ತಿರಲಿಲ್ಲ. 80 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮ ನಿರೂಪಣೆ ಮಾಡಿದ್ದ ಹೆಗ್ಗಳಿಕೆ ಅವರದ್ದು ಎಂದಿದ್ದಾರೆ. ಇನ್ನೂ ಯಾವಾಗಲೂ ಮಜಾ ಟಾಕೀಸ್ನಲ್ಲಿ ರೂಪದ ಬಗ್ಗೆ, ವಯಸ್ಸಿನ ಬಗ್ಗೆ ಕಾಮಿಡಿ ಮಾಡ್ತಿದ್ವಿ ಎಂದು ಸ್ಮರಿಸಿದ್ದರು. ಆಸ್ಟ್ರೇಲಿಯಾಗೆ ನಾವೆಲ್ಲ ಹೋಗಿದ್ದ ದಿನಗಳನ್ನ ಮರೆಯಲು ಆಗಲ್ಲ ಎಂದು ಹಳೆಯ ದಿನಗಳನ್ನು ನೆನೆದು ಮಂಡ್ಯ ರಮೇಶ್ ಭಾವುಕರಾದರು.