ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಅಪರ್ಣಾ ನಿಧನರಾಗಿ ಕೆಲ ದಿನಗಳೇ ಕಳೆದಿದೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟಿಯ ಸಾವು ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಆಘಾತವುಂಟು ಮಾಡಿದೆ. ಇದರ ನಡುವೆ ಅಪರ್ಣಾ ನೆನೆದು ಪತಿ ನಾಗರಾಜ್ ವತ್ಸಾರೆ ಕವನ ಬರೆದಿದ್ದಾರೆ. ಪದವಾಗಿ ಸತ್ತರೂ ಪದ್ಯದ ಮೂಲಕ ಬದುಕಬಹುದು ಎಂದು ವಸ್ತಾರೆ ಬರೆದುಕೊಂಡಿದ್ದಾರೆ.
ಕಚ್ಚುವ ಹಾವಿನ ಹಲ್ಲಡಿಗೇ ಕಡಿತದ ನಂಜು ತೆಗೆಯುವ
ಮದ್ದುಂಟೆಂದು ಕೇಳಪಟ್ಟಿದ್ದೇನೆ
ಯಾವುದೋ ದೇಶದ ಎಂಥದೋ ಕೆಲಮಂದಿ
ಮೈನಂಜಾಗಿ ನರಳುವವರ ಮೇಲೆ ಹಾವು ಹರಿಯಿಸಿ ವಿಷ ತೆಗೆದಿದ್ದುಂಟಂತೆ
ಇದ್ದರೂ ಇರಬಹುದು
ಯಾಕೆಂದರೆ ಮದ್ದಿಗೆ ತಕ್ಕ ಮರುಮದ್ದು ಆ ಮದ್ದೊಳಗೇನೆ ಇದ್ದೀತು
ಉದಾಹರಣೆಗೆ ಕನ್ನಡದ ಮದ್ದನ್ನೇ ತೆಗೆದುಕೊಳ್ಳಿ
ಅದು ಕೇಡೆಸಗುವ ಮದ್ದೂ ಆಗಬಹುದು
ಹುಷಾರು ತಪ್ಪಿದರೆ ಮೈಸಂತಯಿಸಿ ಸಲಹುವ ಔಷಧವೂ ಆಗಬಹುದು
ಅಂದಮೇಲೆ ಮದ್ದು ಮಾಡುವುದೆಂದರೆ ಎರಡೂ ಹವುದು
ಹಾಗೇ ಹಾವಿನ ವಿಷದೊಳಗೆ ಇವೆರಡೂ ಇರಬಹುದು
ವಿಷದೊಳಗೇ ಪ್ರತಿವಿಷವುಂಟೆಂದು ಲೋಕರೂಢಿ
ಪದಕ್ಕೆ ತಕ್ಕ ಪ್ರತಿಪದವಾದರೂ ಪದದೊಳಗೇ ಇರುವುದು
ಕೆಲವೊಮ್ಮೆ ಪದವೇ ಪದ ಹುಟ್ಟಿಸುವುದು
ಅಂದರೆ ಪ್ರತಿ ಪದಕ್ಕೂ ಪ್ರತಿಪದವಿರುವುದು
ಹುಟ್ಟಿಗೆ ಸಾವು ಬಿಚ್ಚಿಗೆ ಕಟ್ಟಿರುವ ಹಾಗೆ ಪಟ್ಟುಪಟ್ಟಿಗೂ
ಮರುಪಟ್ಟಿರುವುದು ಹವುದು
ಮುಯಿಗೆ ಮುಯಿ ಅನ್ನುವರಲ್ಲ ಬಹುಶಃ ಹಾಗೇ
ಇನ್ನು ಪದಪದಕ್ಕು ದಪದಪಕ್ಕೂ ವ್ಯತ್ಯಾಸವೇನು
ಬರೇ ಪದಪದದಿಂದಲೇ ದಪದಪ ರಾಚಬಹುದು
ದಪದಪವೆನ್ನುತ್ತಲೇ ಪದಬರೆದು ಚಚ್ಚಬಹುದು
ಕೊಲ್ಲುವ ಖಡುಗವೇ ಕಾಯಲುಂಟೆಂಬುದು ಹಳೆಯ ಮಾತು
ಕಚ್ಚಿದ ಹಾವು ನಂಜೊಡನೆ ಮದ್ದೂ ಇಳಿಬಿಡುವುದೆಂದು
ಇನ್ನೊಂದು ಅಂಬೋಣ
ಅಂದರೆ ನಂಜೊಳಗಿನ ನಂಜಾಗಿ ಮದ್ದಿರುವುದು
ಅದನ್ನು ಆಯ್ದು ಸೋಸಿ ಮದ್ದಾಗಿಸಿಕೊಳ್ಳುವುದೂ ವಿದ್ಯೆಯೇ
ಇದೇ ನೇರಕ್ಕೆ ಸದ್ದೊಳಗಿನ ಸದ್ದಾಗಿ ತುಸು ಮೌನವಿದ್ದೀತು
ಮೌನವಾದರೂ ಸದ್ದಿಲ್ಲದ ಸದ್ದಿನದೇ ತುಸುತುಣುವು
ಈ ನಡುವೆ ಬದುಕನ್ನು ಹಾವಿಗೆ ಹೋಲಿಸಬಹುದು
ತನ್ನ ತಾನೇ ತಿನ್ನಹೊಂಚುವ ಹಾವಿಗೆ
ಬಾಯೊಳಕ್ಕೆ ಬಾಲವಿರಿಸಿ ಉಣ್ಣಹೊರಟ ಹಾವು
ಈ ಬದುಕಿನ ವರ್ತುಲವನ್ನೇ ಕುರಿತಾಡೀತು
ಹುಟ್ಟಿ ಸತ್ತು ಸತ್ತು ಹುಟ್ಟಿ ಹುಟ್ಟಿ ಸತ್ತು ಸತ್ತು ಹುಟ್ಟಿ
ಹೀಗೆ ಮತ್ತೆ ಮತ್ತೆ ತೆತ್ತು ಇತ್ತು ಇತ್ತು ತೆತ್ತು ತೆತ್ತು ಇತ್ತು ಇತ್ತು ತೆತ್ತು
ಜೀವ ತೆತ್ತಷ್ಟೇ ಜೀವವಿತ್ತು ಜೀವವಿತ್ತಷ್ಟೇ ಜೀವ ತೆತ್ತು
ಬದುಕಿನ ಬೇಸಾಯಕ್ಕೆ ಸಾವನ್ನೊತ್ತೆಯಿಟ್ಟು
ಸಾವಿನ ಸಾಗುವಳಿಗೆ ಬದುಕನ್ನೇ ಕತ್ತೆಯಾಗಿಸಿಬಿಟ್ಟು
ಕೆಲವೊಮ್ಮೆ ತನಗೂ ಮಿಕ್ಕು ದೊಡ್ಡ ಸಂಗತಿಯನ್ನೇ ನುಂಗಲೆಣಿಸುವ
ಹಾವು ಸಾವುಬದುಕಿನ ರೂಪಕವಲ್ಲವೇನು
ಕೆಲವೊಮ್ಮೆ ಪದ್ಯವೂ ತನಗೂ ದೊಡ್ಡದಾದ ರೂಪಕವನ್ನು
ನುಂಗಿ ತೇಗಬೇಕು
ಕ್ಯಾನ್ಸರಿರುವ ಮೈಯಿ ತನ್ನನ್ನು ತಾನೇ ನುಂಗಲೆಣಿಸುವುದಿಲ್ಲವೇ
ಥೇಟು ಹಾಗೆ
ಇದು ಅದನ್ನೂ ಅದು ಇದನ್ನೂ ಒಂದೇ ಸಮ ಕಬಳಿಸಲೆಣಿಸುವುದಲ್ಲವೇ
ಥೇಟು ಹಾಗೆ
ಅದೂ ಇದೂ ಒಂದೇ ಧಾತುವಿನ ಎರಡು ಮೊಹರಂತಲ್ಲವೇ
ಥೇಟು ಹಾಗೆ
ಖೀಮೋಥೆರಪಿಯೆಂದು ವಿಷವನ್ನೂಡಿ
ಮೈಯನ್ನು ಅದರ ಉಳಿಗಾಲಕ್ಕೆಂದು ಅಷ್ಟಿಷ್ಟೇ ಅಳಿಸುವುದಿಲ್ಲವೇ
ಥೇಟು ಹಾಗೆ
ಸತ್ತು ಸತ್ತು ಬದುಕುವ ಪರಿಯೇನೆಂದು ಕ್ಯಾನ್ಸರುಮದ್ದು
ತಿಳಿಹೇಳಬಹುದು
ಮದ್ದೇ ನಂಜೆಂದು ನಂಜೇ ಮದ್ದೆಂದು ಕಂಡವರಿಗಿಂತ
ಉಂಡವರು ಹೇಳಬಹುದು
ಇದ್ದೇನು ಗೆದ್ದೇನೆಂದು ಗೆದ್ದೇನು ಇದ್ದೇನೆಂದು
ಇದ್ದು ಗೆದ್ದ ಮೇಲೂ ಗೆದ್ದು ಇದ್ದ ಮೇಲೂ ಮಂತ್ರದಂತೆ ಸದಾ
ಪಿಟಿಪಿಟಿಸಬಹುದು
ಕೊಲ್ಲುವ ಖಡುಗವೇ ಕಾಯುವ ಸರಕೆಂದು ನಂಬಬಹುದು
ಪದವಾಗಿ ಸತ್ತರೂ ಪದ್ಯವಾಗಿ ಬದುಕಬಹುದು
(ಇದು 2023ರ ಜನವರಿಯಲ್ಲಿ ಬರೆದದ್ದು. ಅಪರ್ಣೆಯ ಚಿತ್ರ ಇದೇ 2024ರ ಏಪ್ರಿಲ್ 9ನೇ ತಾರೀಖಿನ ಯುಗಾದಿಯದ್ದು.)