ಬಿಗ್ಬಾಸ್ (Bigg Boss Kannada) ಮನೆಯಿಂದ ಈ ಶನಿವಾರ ಹೊರಬಿದ್ದ ಸ್ಪರ್ಧಿ ಇಶಾನಿ (Ishani). ಇಷ್ಟು ವಾರಗಳ ಕಾಲದ ಅವರ ಬಿಗ್ಬಾಸ್ ಜರ್ನಿ ಹೇಗಿತ್ತು, ಅವರು ಹೊರಬೀಳಲು ಕಾರಣವಾದ ಸಂಗತಿಗಳು ಏನು, ಷೋ ಬಗ್ಗೆ ಅವರು ಏನು ಹೇಳುತ್ತಾರೆ, ಬಿಗ್ಬಾಸ್ ಮನೆಯಿಂದ ಹೊರಬಿದ್ದ ಮರುಕ್ಷಣವೇ ಅವರ ಎಕ್ಸ್ಕ್ಲೂಸೀವ್ ಸಂದರ್ಶನ ಇಲ್ಲಿದೆ. JioCinemaಗಾಗಿ ಅವರು ಹಲವಾರು ವಿಷಯಗಳನ್ನು ಮಾತನಾಡಿದ್ದಾರೆ.
ಯಾರು ಜೆನ್ಯೂನ್? ಯಾರು ಫೇಕ್?
ಮನೆಯೊಳಗೆ ವಿನಯ್, ನಮ್ರತಾ ಎಲ್ರೂ ಜೆನ್ಯೂನ್ ಆಗಿಯೇ ಇದ್ದರು. ನನ್ನ ಪ್ರಕಾರ ಮೈಕಲ್ ತುಂಬ ಜೆನ್ಯೂನ್ ಆಗಿದ್ದಾರೆ. ಆನಸ್ಟ್ ಆಗಿದ್ದರು. ಲಾಯಲ್ ಆಗಿದ್ದರು. ಅದು ಪ್ರಾರಂಭದಲ್ಲಿ ನನಗೆ ಕಾಣಿಸಲಿಲ್ಲ. ಕೊನೆಕೊನೆಗೆ ಕಾಣಿಸಿತು. ಈಗ ನಾನು ವಾಪಸ್ ಹೋಗಲು ಸಾಧ್ಯವಾದರೆ ಎಲ್ಲದಕ್ಕೂ ಮೈಕಲ್ ಸೈಡ್ ತಗೋತಿದ್ದೆ.
ತುಕಾಲಿ ಅವರನ್ನು ನಾನು ಊಸರವಳ್ಳಿ ಎಂದು ಕರೆದಿದ್ದೆ. ಅದಕ್ಕೆ ಕಾರಣವಿದೆ. ಯಾಕೆಂದರೆ ಅವರು ಒಂದ್ಸಲ ನನ್ನ ಜೊತೆ ಸರಿಯಾಗಿ ಮಾತಾಡ್ತಿದ್ರು. ಮತ್ತೊಮ್ಮೆ ಇನ್ನೊಂದು ಗ್ರೂಪಲ್ಲಿ ಹೋಗಿ ಇನ್ನೇನಾದ್ರೂ ಹೇಳ್ತಿದ್ರು. ಉದ್ದೇಶಪೂರ್ವಕವಾಗಿ ಡ್ರಾಮಾ ಕ್ರಿಯೇಟ್ ಮಾಡಿ ಕಾಣೆಯಾಗ್ತಿದ್ರು. ಹಾಗಾಗಿ ಅವರು ನನಗೆ ಒಂಚೂರು ಇಷ್ಟವಾಗಲಿಲ್ಲ. ಅವರು ನಂಬರ್ ಒನ್ ಫೇಕ್. ಎರಡನೇ ಫೇಕ್ ನೀತು. ಅವರಿಗೆ ಪರ್ಸನಾಲಿಟಿ ಇರಲೇ ಇಲ್ಲ.
ನನ್ನ ಪ್ರಕಾರ ಮನೆಯಲ್ಲಿ ಯಾರೂ ಇನೋಸೆಂಟ್ ಇಲ್ಲ. ಪ್ರತಾಪ್ ಇನೋಸೆಂಟ್ ಅಂದುಕೊಂಡಿದ್ದೆ. ಸ್ವಲ್ಪ ಮುಗ್ಧತೆ ಇದೆ ಅವರಲ್ಲಿ. ಆದರೆ ಅವರು ತುಂಬ ಬುದ್ಧಿವಂತರು. ಅಂದರೆ ಪಾಸಿಟೀವ್ ದೃಷ್ಟಿಯಿಂದಲೇ ಬುದ್ಧಿವಂತರು. ಗೇಮ್ ಹೇಗೆ ಆಡಬೇಕು ಎಂದು ಅವರಿಗೆ ಗೊತ್ತು. ಹಾಗಾಗಿ ಖಂಡಿತವಾಗಿ ಮನೆಯಲ್ಲಿ ಯಾರೂ ಇನೋಸೆಂಟ್ ಇಲ್ಲ.
ಬಿಗ್ಬಾಸ್ ಫಿನಾಲೆಯಲ್ಲಿ ಇರುವ ಐದು ಸ್ಫರ್ಧಿಗಳಲ್ಲಿ ನಾನೂ ಒಬ್ಬಳಾಗಬೇಕು ಎಂದು ನನಗೆ ಆಸೆ ಇತ್ತು. ಆದರೆ ಆಗಲಿಲ್ಲ. ನನ್ನ ಪ್ರಕಾರ ವಿನಯ್, ಮೈಕಲ್, ಸಂಗೀತಾ, ಕಾರ್ತೀಕ್ ಮತ್ತು ನಮ್ರತಾ ಇಷ್ಟು ಜನ ಕೊನೆಯಲ್ಲಿ ಉಳಿದುಕೊಳ್ಳುತ್ತಾರೆ. ಇವರಲ್ಲಿ ಮೈಕಲ್ ಗೆಲ್ಲಬೇಕು ಎಂಬುದು ನನ್ನ ಆಸೆ.
ಕನ್ನಡ ರಾಪ್ ಬರೆಯುವ ಆಸೆ ಇದೆ
ಕನ್ನಡ ಇನ್ನೂ ಕಲಿಯುತ್ತಿದ್ದೇನೆ. ಇನ್ನೂ ಚೆನ್ನಾಗಿ ಕಲಿಯಬೇಕು ಅಂತ ಆಸೆ ಇದೆ. ಇನ್ನಷ್ಟು ಸ್ಪಷ್ಟವಾಗಿ ಕನ್ನಡ ಕಲಿತು, ಕನ್ನಡದಲ್ಲಿಯೇ ರಾಪ್ ಸಾಂಗ್ ಬರೆಯಬೇಕು ಎಂಬ ಆಸೆ ಇದೆ. ಬಿಗ್ಬಾಸ್ ಮನೆಯೊಳಗೂ ಟ್ರೈ ಮಾಡುತ್ತಿದ್ದೆ. ಸ್ವಲ್ಪ ಟೈಮ್ ತಗೊಳ್ತು. ಸ್ನೇಹಿತರ ಹೆಲ್ಪ್ ತಗೊಳ್ತಿದ್ದೆ. ಅವರ ಜೊತೆ ಚರ್ಚಿಸುತ್ತಿದ್ದೆ. ಅದೆಲ್ಲ ಕಲಿಯುತ್ತಿದ್ದೆ. ಇನ್ನು ಮುಂದೆಯೂ ಕನ್ನಡದಲ್ಲಿ ಬರೆಯುವುದನ್ನು ಮುಂದುವರಿಸುತ್ತೇನೆ.