ನವದೆಹಲಿ: ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ವಿಸ್ತೃತ ಅಧಿಕಾರಾವಧಿಯು ಪೂರ್ಣಗೊಳ್ಳುತ್ತಿದ್ದಂತೆ ಮುಖ್ಯ ಕೋಚ್ ಹುದ್ದೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅರ್ಜಿಗಳನ್ನು ಆಹ್ವಾನಿಸಿದೆ. ಭಾರತೀಯ ಕ್ರಿಕೆಟ್ ಮಂಡಳಿಯು ಸೋಮವಾರ ರಾತ್ರಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು,
ಆಸಕ್ತರು ಮೇ 27 ರಂದು ಸಂಜೆ 6 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆ ಪ್ರಕ್ರಿಯೆಯು ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ಒಳಗೊಂಡಿರುತ್ತದೆ. ಬಳಿಕ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನಗಳನ್ನು ಒಳಗೊಂಡಿರುತ್ತದೆ.
ಅಧಿಕಾರಾವಧಿ: ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್ನ ಅವಧಿಯು ಮೂರೂವರೆ ವರ್ಷಗಳಾಗಿರುತ್ತದೆ. ಅಂದರೆ 2024ರ ಜುಲೈ 1 ರಿಂದ 2027 ರ ಡಿಸೆಂಬರ್ 31 ರವರೆಗೆ ಇರುತ್ತದೆ. ಭಾರತ ಪುರುಷರ ಪ್ರದರ್ಶನ ಮತ್ತು ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಮುಖ್ಯ ಕೋಚ್ ಹೊಂದಿರುತ್ತಾರೆ.
ಅರ್ಹತೆ:
* ಕನಿಷ್ಠ 30 ಟೆಸ್ಟ್ ಪಂದ್ಯಗಳನ್ನು ಅಥವಾ 50 ODI ಗಳನ್ನು ಆಡಿರಬೇಕು.
* ಕನಿಷ್ಠ ಎರಡು ವರ್ಷಗಳ ಅವಧಿಯವರೆಗೆ ಟೆಸ್ಟ್ ಆಡುವ ರಾಷ್ಟ್ರದ (ಐಸಿಸಿ ಪೂರ್ಣ-ಸದಸ್ಯ) ಹಿಂದಿನ ಮುಖ್ಯ ಕೋಚ್ ಆಗಿರಬೇಕು.
* ಅಸೋಸಿಯೇಟ್ ಸದಸ್ಯ/ಐಪಿಎಲ್ ತಂಡ ಅಥವಾ ತತ್ಸಮಾನ ಅಂತರಾಷ್ಟ್ರೀಯ ಲೀಗ್/ಪ್ರಥಮ ದರ್ಜೆ ತಂಡಗಳ ಮುಖ್ಯ ತರಬೇತುದಾರ/ರಾಷ್ಟ್ರೀಯ A ತಂಡಗಳು, ಕನಿಷ್ಠ ಮೂರು ವರ್ಷಗಳಿಗಿಂತ ಕಡಿಮೆಯಿಲ್ಲದ ಅವಧಿಗೆ ಮುಖ್ಯ ಕೋಚ್ ಆಗಿರಬೇಕು.
* BCCI ಲೆವೆಲ್ 3 ಪ್ರಮಾಣೀಕರಣವನ್ನು ಹೊಂದಿರಬೇಕು.
* 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.
ಸದ್ಯ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯು ಇದೇ ಜೂನ್ಗೆ ಅಂತ್ಯವಾಗಲಿದೆ. 2024ರ T20 ವಿಶ್ವಕಪ್ ಮಗಿದ ಬಳಿಕ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರ ಸೇವೆ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇದೀಗ ಅರ್ಜಿ ಆಹ್ವಾನಿಸಲಾಗಿದೆ.