ರಾಮನಗರ,: ಕನಕಪುರ ಹಾಗೂ ರಾಮನಗರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಪ್ರಸ್ತಾವನೆಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ತಿರಸ್ಕರಿಸಿರುವುದನ್ನು ಬಿಜೆಪಿ ಸಂಸದ, ಡಾ. ಸಿಎನ್ ಮಂಜುನಾಥ್ ಸಮರ್ಥಿಸಿಕೊಂಡಿದ್ದಾರೆ. ಈ ವಿಚಾರವಾಗಿ ರಾಮನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಮೆಡಿಕಲ್ ಕಾಲೇಜಿಗೆ ಅರ್ಜಿ ಸಲ್ಲಿಸಿರುವುದೇ ತಪ್ಪು. ಅಲ್ಲಿಗೆ 600 ಹಾಸಿಗೆಗಳ ಆಸ್ಪತ್ರೆ ಬೇಕಿತ್ತು. ಆಸ್ಪತ್ರೆಯನ್ನು ಕಟ್ಟಿಯೇ ಇಲ್ಲ. ಬೋಧಕರನ್ನು ನೇಮಕ ಮಾಡಬೇಕು. ಅದನ್ನೂ ಮಾಡಿಲ್ಲ. ಇಷ್ಟು ಮಾಡದೆ ಅರ್ಜಿ ಹಾಕುವುದೇ ತಪ್ಪು ಎಂದು ಹೇಳಿದರು.
ರಾಮನಗರಕ್ಕೆ ಮರು ನಾಮಕರಣ ಮಾಡುವ ಬಗ್ಗೆ ಹಾಸನದವರು ಮಾತ್ರ ವಿರೋಧ ಮಾಡುತ್ತಿದ್ದಾರೆ ಎಂಬ ಮಾಗಡಿ ಶಾಸಕ ಎಚ್ಸಿ ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು 40 ವರ್ಷಗಳಿಂದ ಬೆಂಗಳೂರಿನಲ್ಲೇ ಇದ್ದೇವೆ. ಆಗ ಅವರೇ (ಬಾಲಕೃಷ್ಣ) ಬೆಂಗಳೂರಿನಲ್ಲಿ ಇರಲಿಲ್ಲ. ಹಿಂದೆ ರಾಮನಗರ ಜಿಲ್ಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯೇ ಆಗಿತ್ತು ಅಲ್ಲವೇ ಎಂದು ಪ್ರಶ್ನಿಸಿದರು.
ಕನಕಪುರ ಹಾಗೂ ರಾಮನಗರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ವಿಚಾರವಾಗಿ ಸಲ್ಲಿಸಲಾಗಿದ್ದ ಪ್ರಸ್ತಾವನೆಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ಇತ್ತೀಚೆಗೆ ತಿರಸ್ಕರಿಸಿತ್ತು. ತಾಂತ್ರಿಕ ಸಮಸ್ಯೆಗಳ ಕಾರಣ ನೀಡಿ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿತ್ತು. ಇದು ಡಿಸಿಎಂ ಡಿಕೆ ಶಿವಕುಮಾರ್ಗೆ ಹಿನ್ನಡೆ ಎಂದೇ ವಿಶ್ಲೇಷಿಸಲಾಗಿತ್ತು.