ನವದೆಹಲಿ ;- ಚಂದ್ರಯಾನದ ಯಶಸ್ಸಿನಲ್ಲಿ ಮಹಿಳಾ ವಿಜ್ಞಾನಿಗಳ ಪಾತ್ರ ಶ್ಲಾಘನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,(ಇಸ್ರೋ) ಯಶಸ್ವಿ ಚಂದ್ರಯಾನದಲ್ಲಿ ಅನೇಕ ಮಹಿಳಾ ವಿಜ್ಞಾನಿಗಳ ಪಾಲ್ಗೊಳ್ಳುವಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯೋಜನೆಯ ಯಶಸ್ಸಿನೊಂದಿಗೆ ಭಾರತ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಯಶಸ್ಸಿನಲ್ಲಿ ಅನೇಕ ಮಹಿಳಾ ವಿಜ್ಞಾನಿಗಳು ಭಾಗಿಯಾಗಿರುವುದು ಸಂತಸದ ಸಂಗತಿ ಎಂದರು.
ಇದೇ ವೇಳೆ, ವಿಶ್ವ ಸಂಸ್ಕೃತ ದಿನದ ಸಂದರ್ಭದಲ್ಲಿ ದೇಶದ ಜನರಿಗೆ ಶುಭ ಕೋರಿದ ಮೋದಿ, ಸಂಸ್ಕೃತ ವಿಜ್ಞಾನ ಮತ್ತು ವ್ಯಾಕರಣಕ್ಕೆ ಹೆಸರುವಾಸಿಯಾಗಿದೆ. ದೇಶದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಪ್ರಾಚೀನ ಭಾಷೆ ಉತ್ತೇಜಿಸುವ ಅಗತ್ಯವಿದೆ. ಸಂಸ್ಕೃತ ವಿಶ್ವವಿದ್ಯಾಲಯಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಜತೆಗೆ ದೇಶಪ್ರೇಮದ ಮನೋಭಾವ ಕೂಡ ಉತ್ತುಂಗದಲ್ಲಿದೆ ಎಂದು ತಿಳಿಸಿದರು. ರಾಷ್ಟ್ರದ ವೈವಿಧ್ಯತೆಯನ್ನು ಅನ್ವೇಷಿಸಲು ಜನರಿಗೆ ಕರೆ ನೀಡಿದ ಪ್ರಧಾನಿ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಲ್ಲಿ ತೊಡಗಿರುವ ಎಲ್ಲರನ್ನೂ ಶ್ಲಾಘಿಸಿದರು.
ಪ್ರಧಾನಿ ಮಾಸಿಕ ರೇಡಿಯೋ ಕಾರ್ಯಕ್ರಮದ ಪ್ರಸಾರ ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಿತ್ತು. ಇದಕ್ಕೂ ಮೊದಲು ಪ್ರಧಾನಿ ಸಾಮಾಜಿಕ ಜಾಲತಾಣ ಮಾಧ್ಯಮ ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) “ಭಾನುವಾರ ಬೆಳಗ್ಗೆ 11 ಗಂಟೆಗೆ ‘ಮನ್ ಕಿ ಬಾತ್’ ಕೇಳಿ. ಭಾರತದಾದ್ಯಂತ ಸ್ಪೂರ್ತಿದಾಯಕ ಜೀವನ ಪ್ರಯಾಣಗಳ ಬಗ್ಗೆ ಮಾತನಾಡಲು ನನಗೆ ಯಾವಾಗಲೂ ಸಂತೋಷವಾಗುತ್ತದೆ” ಎಂದು ಹೇಳಿದ್ದರು.