ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಕಷ್ಟು ಕನಸುಗಳನ್ನು ಕಂಡಿದ್ದರು. ಸಾಕಷ್ಟು ಕನಸುಗಳನ್ನು ನನಸಾಗಿಸಿದ್ದ ಅಪ್ಪು ಇನ್ನೂ ಕೆಲವನ್ನೂ ಹಾಗೆಯೇ ಬಿಟ್ಟು ಮಧ್ಯದಲ್ಲಿಯೇ ಹೊರಟು ಹೋದರು. ಇದೀಗ ಪುನೀತ್ ಕಂಡ ಕನಸನ್ನು ನನಸಾಗಿಸಲು ಪತ್ನಿ ಅಶ್ವೀನಿ ಪುನೀತ್ ರಾಜ್ ಕುಮಾರ್ ಮುಂದಾಗಿದ್ದಾರೆ.
ಅಪ್ಪು ನಿಧನರಾಗಿ ಎರಡು ವರ್ಷ ಕಳೆದಿದೆ. ಆ ನೋವು ಈಗಲೂ ಎಲ್ಲರನ್ನೂ ಕಾಡುತ್ತಿದೆ. ಹಿಂಡುತ್ತಿದೆ. ಆದರೆ ಪತಿ ಕನಸುಗಳನ್ನು ಅಲ್ಲಲ್ಲೇ ಬಿಡಬಾರದಲ್ಲವೆ ? ಅದಕ್ಕಾಗಿಯೇ ಅಶ್ವಿನಿ ಅಂದೇ ಗಟ್ಟಿ ನಿರ್ಧಾರಕ್ಕೆ ಬಂದಿದ್ದರು. ಅಪ್ಪು ಏನೇನು ಆಸೆ ಪಟ್ಟಿದ್ದರೋ, ಏನೇನೊ ಸಿನಿಮಾಗಳನ್ನು ಮಾಡಬೇಕೆಂದು ತೀರ್ಮಾನಿಸಿದ್ದರೊ, ಅದನ್ನೆಲ್ಲ ಈಗ ಇವರು ಮಾಡಲು ತಯಾರಾಗಿದ್ದಾರೆ. ಪಿಆರ್ಕೆ ಬ್ಯಾನರ್ ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅದರ ಮೊದಲ ಮೆಟ್ಟಿಲಾಗಿ ಎರಡು ಸಿನಿಮಾ ತಯಾರಾಗಿದ್ದು, ಬಿಡುಗಡೆಗೆ ಸಿದ್ಧವಾಗುತ್ತಿವೆ. ಆಚಾರ್ ಅಂಡ್ ಕೋ ಹಾಗೂ ಓಟು ಸಿನಿಮಾಗಳು ಜನರ ಮುಂದೆ ಬರಲು ಸಜ್ಜಾಗಿವೆ.
ಇನ್ನೊಂದು ಕಡೆ ಅನೇಕ ಹೊಸಬರ ಕತೆಗಳನ್ನು ಕೇಳುತ್ತಿದ್ದಾರೆ. ಈಗಾಗಲೇ ಹೆಚ್ಚು ಕಮ್ಮಿ ಹದಿನೈದು ಕತೆಗಳನ್ನು ಕೇಳಿದ್ದಾರೆ. ಎಲ್ಲರೂ ಹೊಸಬರೇ. ಯಾರನ್ನೂ ಅವರು ನಿರಾಸೆ ಮಾಡುವುದಿಲ್ಲ. ಯಾವ್ಯಾವುದೋ ಕನಸು ಹೊತ್ತು ಬಂದಿರುವ ಆ ಜೀವಗಳನ್ನು ಪ್ರೀತಿಯಿಂದ ಕೂಡಿಸಿ ಕತೆ ಕೇಳುತ್ತಾರೆ. ಕೊನೆಗೆ ಅಂತಿಮ ನಿರ್ಧಾರಕ್ಕೆ ಬರುತ್ತಾರೆ. ಈ ಹದಿನೈದು ಕತೆಗಳಲ್ಲಿ 2 ಕತೆಯನ್ನು ಮಾತ್ರ ಅವರು ಓಕೆ ಮಾಡಿದ್ದಾರೆ. ಅದು ಯಾವುದೆಂದು ಗೊತ್ತಾಗಿಲ್ಲ. ಅದರ ಶೂಟಿಂಗ್ ಶುರು ಮಾಡುವ ಎಲ್ಲ ಸಿದ್ದತೆಗಳು ನಡೆಯುತ್ತಿವೆ.
ಇನ್ನೊಂದು ಕಡೆ ಪಕ್ಕಾ ಹೊಸಬರ ತಂಡದ ಜತೆ ಸಿನಿಮಾ ಮಾಡಲು ತೀರ್ಮಾನಿಸಿದ್ದಾರೆ. ಮತ್ತೊಂದು ಅನುಭವಿ ತಂಡಕ್ಕೂ ಬಂಡವಾಳ ಹಾಕಲಿದ್ದಾರೆ. ಈ ವರ್ಷದ ಕೊನೆಗೆ ಎರಡೂ ಸಿನಿಮಾಗಳ ಮುಹೂರ್ತ ನಡೆಯಲಿದೆ. ಮುಂದಿನ ವರ್ಷ ಬಿಡುಗಡೆ ಮಾಡುವ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ