ಶಿವಮೊಗ್ಗ : ಕೃಷಿಭೂಮಿ ಹೋರಾಟಗಳಿಂದ ಹೆಸರುವಾಸಿಯಾಗಿರುವ ಸಹ್ಯಾದ್ರಿ ಬೆಟ್ಟಗಳ ತಪ್ಪಲು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಿಮ್ಮನೆ ರತ್ನಾಕರ್ ವಿರುದ್ಧ ಆರಗ ಜ್ಞಾನೇಂದ್ರ 11 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಗಳಿಸಿದ್ದಾರೆ. ಸತತ ಐದನೇ ಬಾರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ ಪರಸ್ಪರ ಸ್ಪರ್ಧಿಸಿದ್ದರು. ಈ ಹಿಂದೆ ಮೂರು ಬಾರಿ ಆರಗ ಜ್ಞಾನೇಂದ್ರ ಗೆಲುವು ಸಾಧಿಸಿದ್ದರೆ ಕಿಮ್ಮನೆ ಎರಡು ಬಾರಿ ಗೆದ್ದಿದ್ದಾರೆ. ಒಟ್ಟಾರೆ 4 ಬಾರಿ ತೀರ್ಥಹಳ್ಳಿ ಕ್ಷೇತ್ರವನ್ನು ಆರಗ ಜ್ಞಾನೇಂದ್ರ ಪ್ರತಿನಿಧಿಸಿದ್ದಾರೆ.
ವಿಶೇಷವಾಗಿ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ, ಎಐಸಿಸಿ ಅಧ್ಯಕ್ಷ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರತುಪಡಿಸಿದರೆ ರಾಜ್ಯದಲ್ಲಿ 10ನೇ ಬಾರಿ ವಿಧಾನಸಭೆಗೆ ಸ್ಪರ್ಧಿಸುತ್ತಿರುವವರಲ್ಲಿ ಆರಗ ಜ್ಞಾನೇಂದ್ರ ಪ್ರಮುಖರು. ಮಲ್ಲಿಕಾರ್ಜುನ ಖರ್ಗೆಯವರು 10 ಬಾರಿ ವಿಧಾನಸಭೆಗೆ ಸ್ಪರ್ಧಿಸಿ ದಾಖಲೆ ನಿರ್ಮಿಸಿದ್ದಾರೆ. ಈಗ ಆರಗ ಜ್ಞಾನೇಂದ್ರ ಕೂಡ 10ನೇ ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದಾರೆ. ಜೊತೆಗೆ, 10 ಬಾರಿಯೂ ಒಂದೇ ಪಕ್ಷ ಮತ್ತು ಒಂದೇ ಚಿಹ್ನೆಯಡಿ ಸ್ಪರ್ಧೆ ಮಾಡಿದ್ದಾರೆ. 1983ರಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಅವರು ಬಿಜೆಪಿಯಿಂದ ವಿಧಾನಸಭೆಗೆ ಸ್ಪರ್ಧಿಸಿದ್ದರು.