ಹಾಸನ:-ಮಗನೋರ್ವ ಕುಡಿಯಲು ಹಣ ಕೊಡದ ತಾಯಿಗೆ ಮನಬಂದಂತೆ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಿಸದೇ ತಾಯಿ ದುರ್ಮರಣ ಹೊಂದಿದ ಘಟನೆ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮಧುರನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಕುಡಿಯಲು ಹಣ ನೀಡದ ಕಾರಣಕ್ಕೆ ಮನಬಂದಂತೆ ಥಳಿಸಿ ತಾಯಿಯನ್ನೇ ಮಗ ಕೊಂದಿದ್ದಾನೆ. 61 ವರ್ಷದ ಚಿಕ್ಕಮ್ಮ ಕೊಲೆಯಾದ ದುರ್ದೈವಿ. 26 ವರ್ಷದ ಭರತ್ ಕೊಲೆ ಮಾಡಿದ ಪಾಪಿ ತಂದೆ.
ಭರತ್ ಎಂಬಾತ ಕುಡಿತದ ದಾಸನಾಗಿದ್ದು, ಪೈಂಟ್ ಕೆಲಸ ಮಾಡುತ್ತಿದ್ದ. ಈತ ಅ.29ರಂದು ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದು, ತಾಯಿ ಚಿಕ್ಕಮ್ಮ ಬಳಿ ಕುಡಿಯಲು ಹಣ ನೀಡುವಂತೆ ಒತ್ತಾಯಿಸಿದ್ದನು. ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ಭರತ್ ಕೋಪಗೊಂಡು ಚಿಕ್ಕಮ್ಮನಿಗೆ ದೊಣ್ಣೆಯಿಂದ ಹೊಡೆದು, ತಲೆಯನ್ನು ಗೋಡೆಗೆ ಬಡಿದು ಪರಾರಿಯಾಗಿದ್ದಾನೆ.
ಹಲ್ಲೆಗೊಳಗಾಗಿ ಚಿಕ್ಕಮ್ಮ ಕುಸಿದು ಬಿದ್ದಿರುವುದನ್ನು ಗ್ರಾಮಸ್ಥರು ಕಂಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಚಿಕ್ಕಮ್ಮ ಸಾವನ್ನಪ್ಪಿದ್ದಾರೆ.