ಬೆಂಗಳೂರು: ಹೊಸ ವರ್ಷದಿಂದ ಹೊಸ ನಿಯಮಗಳು ಜಾರಿಗೆ ಬರಲಿದೆ. ಈ ಬದಲಾವಣೆ ನಿಮ್ಮ ಜೇಬಿಗೆ ಕತ್ತರಿ ಕೂಡ ಹಾಕಬಹುದು. ಹೌದು ಇದು ನಿಮ್ಮ ದಿನನಿತ್ಯ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಹಾಗೂ ವಸ್ತುಗಳ ಬೆಲೆಯಲ್ಲಿ ಬದಲಾವಣೆಯನ್ನು ತರಲಿದೆ.
ಅದರಂತೆ ಹೊಸ ವರ್ಷದಿಂದ ಹೊಸ ಸಿಮ್ ಖರೀದಿಸುವುದು ಸುಲಭವಲ್ಲ. ಇಷ್ಟೇ ಅಲ್ಲ ಇನ್ಯಾರದ್ದೋ ಹೆಸರಿನಲ್ಲಿ ಸಿಮ್ ಖರೀದಿ ಕೂಡ ಸಾಧ್ಯವಿಲ್ಲ. ಒಂದು ವೇಳೆ ಬೇರೆಯವರ ಹೆಸರಿನಲ್ಲಿ ಸಿಮ್ ಖರೀದಿಸಿ ನಿಯಮ ಉಲ್ಲಂಘಿಸಿದರೆ ಕನಿಷ್ಠ 3 ವರ್ಷ ಬ್ಯಾನ್ ಸೇರಿದಂತೆ ಹಲವು ಕಠಿಣ ಶಿಕ್ಷೆ ಕ್ರಮಗಳು ಜನವರಿ 1 ರಿಂದ ಜಾರಿಯಾಗುತ್ತಿದೆ.
ಡೆಪಾರ್ಟ್ಮೆಂಟ್ ಆಫ್ ಟೆಲಿಕಮ್ಯೂನಿಕೇಶನ್ ಹೊಸ ಹಾಗೂ ಕಟ್ಟು ನಿಟ್ಟಿನ ನಿಯಮ ಜಾರಿ ಮಾಡುತ್ತಿದೆ. ಪ್ರಮುಖವಾಗಿ ಭಾರತದಲ್ಲಿ ಮೊಬೈಲ್ ಬಳೆಕೆದಾರರು ಅನಾಮಿಕ ಕರೆಗಳು, ಸೈಬರ್ ವಂಚನೆ, ಸ್ಪ್ಯಾಮ್ ಕಾಲ್ಸ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ.
ನಕಲಿ ದಾಖಲೆಗಳನ್ನು ನೀಡಿ ಸಿಮ್ ಖರೀದಿಸಿ ಬಳಿಕ ಅಮಾಯಕರನ್ನು ವಂಚಿಸಲು ಬಳಸುತ್ತಿದ್ದಾರೆ. ಇದರ ಜೊತೆ ಮಾರ್ಕೆಟಿಂಗ್ ಕರೆ, ಜಾಹೀರಾತು ಕರೆ ಸೇರಿದಂತೆ ಹಲವು ಅನಗತ್ಯ ಕರೆಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇವೆಲ್ಲದರಿಂದ ಬಳಕೆದಾರನಿಗೆ ಮುಕ್ತಿ ನೀಡಲು ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯೂನಿಕೇಶನ್ ಕಟ್ಟು ನಿಟ್ಟಿನ ನಿಯಮ ಜನವರಿ 1 ರಿಂದ ಜಾರಿಗೆ ಬರುತ್ತಿದೆ.
ಬೇರೆಯವರ ಹೆಸರಿನಲ್ಲಿ ಸಿಮ್ ಖರೀದಿಸುವಂತಿಲ್ಲ. ಒಂದು ವೇಳೆ ನಕಲಿ ದಾಖಲೆ ಅಥವಾ ಇನ್ಯಾವುದೇ ರೂಪದಲ್ಲಿ ಈ ರೀತಿ ಸಿಮ್ ಖರೀದಿಸಿದರೆ ನಿಯಮ ಬಿಗಿಯಾಗಿದೆ. ಈ ರೀತಿ ನಿಯಮ ಉಲ್ಲಂಘಿಸುವವರಿಗೆ 3 ವರ್ಷ ಬ್ಯಾನ್ ಶಿಕ್ಷೆ ನೀಡಲಾಗುತ್ತದೆ. ಈ ಮೂರುು ವರ್ಷ ಯಾರು ನಿಯಮ ಉಲ್ಲಂಘಿಸುತ್ತಾರೋ ಅವರ ಹೆಸರಿನಲ್ಲಿ ಯಾವುದೇ ಟೆಲಿಕಾಂ ಕಂಪನಿಗಳು ಸಿಮ್ ನೀಡುವುದಿಲ್ಲ. ಹೊಸ ನಂಬರ್, ಅನಾಮಿಕ ನಂಬರ್ ಮೂಲಕ ಕರೆ ಮಾಡಿ ವಂಚನೆ ಮಾಡುವ ಪ್ರಕ್ರಿಯೆಗೆ ಬ್ರೇಕ್ ಹಾಕಲಾಗುತ್ತಿದೆ. ಈ ನಿಟ್ಟಿನಲ್ಲಿ ಹೊಸ ವರ್ಷದಿಂದ ನಿಯಮಗಳು ಜಾರಿಯಾಗಲಿದೆ.
ವಂಚನೆ ದೂರು ದಾಖಲಾದ ಬೆನ್ನಲ್ಲೇ ಕರೆ ಬಂದಿರುವ ನಂಬರ್ ಯಾರ ಹೆಸರಿನಲ್ಲಿದೆಯೋ ಅವರಿಗೆ ನೋಟಿಸ್ ನೀಡಲಾಗುತ್ತದೆ. 7 ದಿನಗಳಲ್ಲಿ ಉತ್ತರ ನೀಡಬೇಕಾಗಿದೆ.
ಉತ್ತರಿಸದಿದ್ದರೆ ಬ್ಲಾಕ್ ಮಾಡಲಾಗುತ್ತದೆ. ಉತ್ತರದಲ್ಲಿ ಅನುಮಾನ ಕಂಡಬಂದರೂ ನಂಬರ್ ಬ್ಲಾಕ್ ಆಗಲಿದೆ. ವಂಚನೆ ವಿರುದ್ದ ಈ ಬಾರಿ ಭಾರತ ಹೊಸ ಅಭಿಯಾನ ಆರಂಭಿಸುತ್ತಿದೆ. ಈ ಮೂಲಕ ಫೋನ್ ಮೂಲಕ ಲಕ್ಷ ರೂಪಾಯಿ, ಕೋಟಿ ರೂಪಾಯಿ ಜೊತೆಗೆ ಮಹತ್ವದ ಡೇಟಾ ಕಳೆದುಕೊಳ್ಳುತ್ತಿರುವವರಿಗೆ ಅಭಯ ನೀಡಿದೆ.
ಹೊಸ ಸಿಮ್ ಕಾರ್ಡ್ ಖರೀದಿಸಲು ಕೆಲ ಅಗತ್ಯ ದಾಖಲೆ ನೀಡಬೇಕು. ಆಧಾರ್ ಕಾರ್ಡ್ ಸೇರಿದಂತೆ ಕೆಲ ಪ್ರಮುಖ ದಾಖಲೆಗಳ ಆಧಾರದಲ್ಲಿ ಹೊಸ ಸಿಮ್ ಕಾರ್ಡ್ ಖರೀದಿಸಲು ಸಾಧ್ಯವಿದೆ. ಖರೀದಿ ಬೆನ್ನಲ್ಲೇ ಕೆವೈಸಿ ಮಾಡಿಸಿಕೊಳ್ಳಬೇಕು. ಇನ್ಯಾರದ್ದೂ ದಾಖಲೆ ನೀಡಿ ಸಿಮ್ ಖರೀದಿಸಲು ಇನ್ನು ಅವಕಾಶವಿರುವುದಿಲ್ಲ. ಸೈಬರ್ ಸೆಕ್ಯೂರಿಟಿ ಮತ್ತಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಹೊಸ ನಿಯಮವನ್ನು ನವೆಂಬರ್ ತಿಂಗಳಲ್ಲಿ ಘೋಷಣೆ ಮಾಡಲಾಗಿದೆ. ಇದೀಗ ನಿಯಮವಾಗಿ ಜಾರಿಯಾಗುತ್ತಿದೆ.