ಫ್ಯಾಟಿ ಲಿವರ್ ಎಂಬ ಸಮಸ್ಯೆ ಇಂದು ಬಹಳ ಸಾಮಾನ್ಯವಾಗಿದೆ. ಜೀವನಕ್ರಮ, ಆಲ್ಕೋಹಾಲ್ ಸೇವನೆ, ಬದಲಾದ ಆಹಾರ ಕ್ರಮ ಇತ್ಯಾದಿ ಇತ್ಯಾದಿಗಳ ಕಾರಣದಿಂದಾಗಿ ಇಂದು ಫ್ಯಾಟಿ ಲಿವರ್ ಬಹುತೇಕರ ಬದುಕಿನಲ್ಲಿ ಸಾಮಾನ್ಯವಾಗಿದೆ. ಸರಿಯಾದ ಆಹಾರಕ್ರಮ, ಶಿಸ್ತಿನ ಜೀವನ ಹಾಗೂ, ನಿಯಮಿಯ ಯೋಗ ವ್ಯಾಯಾಮಗಳಿಂದ ಫ್ಯಾಟಿ ಲಿವರ್ ಸಮಸ್ಯೆಯನ್ನು ಯಾವ ಔಷಧಿಯೂ ಇಲ್ಲದೆ ಮತ್ತೆ ಸರಿಪಡಿಸಿಕೊಳ್ಳಬಹುದು. ಜೊತೆಗೆ ಈ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಿಸಲು ಕಾರಣವಾಗುವ ಆಹಾರಗಳನ್ನು ದೂರವಿಡುವುದೂ ಕೂಡಾ ಬಹಳ ಮುಖ್ಯವಾಗುತ್ತದೆ. ಲಿವರ್ ಅಥವಾ ಪಿತ್ತಕೋಶದಲ್ಲಿ ಕೊಬ್ಬು ಸಂಗ್ರಹಣೆಗೊಂಡು ಪಿತ್ತಕೋಶದ ಆರೋಗ್ಯವನ್ನು ಹಾಳು ಮಾಡುವ ಮೂಲಕ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣವಾಗುವ ಈ ಸಮಸ್ಯೆಯನ್ನು ಆರಂಭದಲ್ಲೇ ಸರಿಪಡಿಸಿಕೊಂಡು ಶಿಸ್ತಿನ ಜೀವನ ಹಾಗೂ ಆಹಾರಕ್ರಮಗಳನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯ ಎನ್ನುತ್ತಾರೆ ವೈದ್ಯರು. ಬನ್ನಿ, ಫ್ಯಾಟಿ ಲಿವರ್ ಸಮಸ್ಯೆಯನ್ನು ನೀವು ಹೊಂದಿದ್ದರೆ, ಈ ಮೂರು ಪೇಯಗಳನ್ನು ಸೇವಿಸುವ ಮೊದಲು ಎಚ್ಚರಿಕೆ ವಹಿಸಿ. ಯಾಕೆಂದರೆ ಇದು ನಿಮ್ಮ ಶತ್ರುವಾಗಬಹುದು. ಈ ಕೆಳಗಿನ ಮೂರು ಬಗೆಯ ಪೇಯಗಳನ್ನು ನಿಮ್ಮ ಹತ್ತಿರಕ್ಕೂ ಸುಳಿಯದಂತೆ ಸದಾ ಕಾಲ ಎಚ್ಚರ ವಹಿಸಿದರೆ, ನಿಮ್ಮ ಪಿತ್ತಕೋಶ ಆರೋಗ್ಯವಾಗಿದ್ದೀತು.
ಸೋಡಾಗಳು
ಬಹಳಷ್ಟು ಮಂದಿಗೆ ಸೋಡಾ ಹಾಗೂ ಕಾರ್ಬೋನೇಟೆಡ್ ಡ್ರಿಂಕ್ಗಳ ಸೇವನೆ ರೂಢಿಯಾಗಿಬಿಟ್ಟಿರುತ್ತದೆ. ಇನ್ನೂ ಕೆಲವರು ಆಲ್ಕೋಹಾಲ್ ಸೇವನೆಯನ್ನು ಬಿಟ್ಟು ಅದಕ್ಕೆ ಪರ್ಯಾಯವಾಗಿ ಪಾರ್ಟಿಗಳಲ್ಲಿ ಸೋಡಾ ಅಥವಾ ಸೋಡಾ ಹಾಕಿದ ಸಾಫ್ಟ್ ಡ್ರಿಂಕ್ಗಳೆಡೆಗೆ ಹೊರಳುತ್ತಾರೆ. ಆದರೆ, ಸೋಡಾ ಕೂಡಾ ಫ್ಯಾಟಿ ಲಿವರ್ಗೆ ಒಳ್ಳೆಯದಲ್ಲ. ಸೋಡಾದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆಯಿದ್ದು, ಇದು ಫ್ಯಾಟಿ ಲಿವರ್ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಿಸುವಂತೆ ಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ, ಇಂತಹ ಪೆಯಗಳನ್ನು ನಿತ್ಯವೂ ಐದಾರು ವರ್ಷಗಳ ಕಾಲ ಸೇವನೆ ಮಾಡಿದರೆ ಖಂಡಿತವಾಗಿಯೂ ಫ್ಯಾಟಿ ಲಿವರ್ ಸಮಸ್ಯೆಯನ್ನು ತಂದೊಡ್ಡುತ್ತದೆ.
ಪಿತ್ತಕೋಶ/ಲಿವರ್ಗೆ ಮದ್ಯಾಪಾನ ಒಳ್ಳೆಯದಲ್ಲ. ಮದ್ಯಪಾನ ಮಾಡುವುದರಿಂದ ಪಿತ್ತಕೋಶದ ಹದ ತಪ್ಪುತ್ತದೆ. ಫ್ಯಾಟಿ ಲಿವರ್ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಯಮಿತವಾಗಿ ಮದ್ಯಪಾನ ಮಾಡುವುದರಿಂದ ದೀರ್ಘಕಾಲಿಕ ಪಿತ್ತಕೋಶದ ಸಮಸ್ಯೆಗಳು ಬಾಧೀಸಬಹುದು. ಆಗಾಗ ಆರೋಗ್ಯ ಹದಗೆಡುವುದು, ಜಾಂಡೀಸ್, ಗಂಟುಗಳಲ್ಲಿ ಬಾವು- ಸೆಳೆತ, ರ್ಕತವಾಂತಿ ಇತ್ಯಾದಿ ಸಮಸ್ಯೆಗಳೂ ಉಲ್ಬಣಿಸಬಹುದು.
ಸ್ಪೋರ್ಟ್ಸ್ ಹಾಗೂ ಎನರ್ಜಿ ಡ್ರಿಂಕ್ಗಳೆಂಬ ಶಕ್ತಿವರ್ಧಕ ಪೇಯಗಳಲ್ಲಿ ಅತಿಯಾದ ಸಕ್ಕರೆ ಇರುವುದರಿಂದ ಇದು ಖಂಡಿತವಾಗಿಯೂ ಫ್ಯಾಟಿ ಲಿವರ್ ಸಮಸ್ಯೆಗೆ ಅಪಾಯಕಾರಿ. ಇತ್ತೀಚೆಗೆ ಯುವಕರು ಹೆಚ್ಚು ಹೆಚ್ಚು ಇಂತಹ ಡ್ರಿಂಕ್ಗಳನ್ನು ಕುಡಿಯುವ ಅಭ್ಯಾಸ ಮಾಡಿಕೊಂಡಿರುವುದು ಹಾಗೂ ಅದನ್ನು ಕುಡಿಯುವುದನ್ನು ಫ್ಯಾಷನ್ ಎಂಬುದಾಗಿ ಅಂದುಕೊಂಡಿರುವುದೇ ಸಮಸ್ಯೆಯನ್ನು ತರಬಹುದು. ಫ್ಯಾಟಿ ಲಿವರ್ ಸಮಸ್ಯೆ ಇರಲಿ, ಇಲ್ಲದಿರಲಿ, ಇಂತಹ ಪೇಯಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಒಡನೆಯೇ ಶಕ್ತಿವರ್ಧಿಸಲು ಅಗತ್ಯದ ಸಂದರ್ಭಗಳಲ್ಲಿ ಸಹಾಯಕ್ಕೆ ಬರಬಹುದಾದರೂ ನಿತ್ಯ ಸೇವನೆಯಂತೂ ಕಡ್ಡಾಯವಾಗಿ ಸಲ್ಲದು ಎಂಬುದನ್ನು ನೆನಪಿಡಿ. ಇದರ ಬದಲಾಗಿ, ಕಾಫಿಯನ್ನು ಕುಡಿಯಬಹುದು. ಫ್ಯಾಟಿ ಲಿವರ್ಗೆ ಹಾಲು ಹಾಕದ ಬ್ಲ್ಯಾಕ್ ಕಾಫಿ ಸೇವನೆ ಒಳ್ಳೆಯದು. ಆದರೆ, ಅತುಯಾದ ಕಾಫಿ ಸೇವನೆಯೂ ಒಳ್ಳೆಯದಲ್ಲ. ದಿನಕ್ಕೊಮ್ಮೆ ಅಥವಾ ಎರಡು ಬಾರಿ ಹೀಗೆ ಬ್ಲ್ಯಾಕ್ ಕಾಫಿ ಸೇವನೆ ಮಾಡಬಹುದು. ಇದು ಫ್ಯಾಟಿ ಲಿವರ್ ಸಮಸ್ಯೆಯನ್ನು ತಗ್ಗಿಸುವಲ್ಲಿ ನೆರವಾಗುತ್ತದೆ.