ನಮಗೆ ವಿಟಮಿನ್ ಡಿ ಯಾಕೆ ಬೇಕು ಎಂದರೆ ನಾವು ಮೊದಲು ಕೊಡುವ ಉತ್ತರ ಎಲುಬಿನ ಆರೋಗ್ಯಕ್ಕೆ. ಸಂಧಿವಾತ, ಎಲುಬಿನಲ್ಲಿ ಸವೆತ, ಎಲುಬಿನಲ್ಲಿ ಸಾಂದ್ರತೆ ಕಡಿಮೆಯಾಗುವುದು ಇತ್ಯಾದಿ ಸಮಸ್ಯೆಗಳು ಕಾಡದೆ ಇರಬೇಕೆಂದರೆ ನಮ್ಮ ದೇಹಕ್ಕೆ ಸರಿಯಾಗಿ ವಿಟಮಿನ್ ಡಿ ಪೂರೈಕೆಯಾಗುತ್ತಲೂ ಇರಬೇಕು. ಕೇವಲ ಎಲುಬಿನ ಆರೋಗ್ಯವೊಂದೇ ವಿಟಮಿನ್ ಡಿಯ ಮೇಲೆ ನಿಂತಿಲ್ಲ. ದೇಹ ಎಲ್ಲ ರೀತಿಯಲ್ಲೂ ಸೌಖ್ಯವಾಗಬೇಕಾಗಿದ್ದರೆ ವಿಟಮಿನ್ ಡಿ ಅವಶ್ಯಕವಾಗಿ ಬೇಕು. ನಮ್ಮ ನಿತ್ಯದ ಸಂತೋಷದ ಹಿಂದೆಯೂ ವಿಟಮಿನ್ ಡಿಯ ಕೈಚಳಕವಿದೆ. ವಿಟಮಿನ್ ಡಿ ಕೊರತೆಯಿಂದ ಖಿನ್ನತೆಯೂ ಬರುವ ಸಾಧ್ಯತೆಗಳಿವೆ ಎಂದು ಇತ್ತೀಚೆಗಿನ ಸಂಶೋಧನೆಗಳು ಬಹಿರಂಗಪಡಿಸಿವೆ. ವಿಟಮಿನ್ ಡಿ ಕೊರತೆಯಾದರೆ ಈ ಕೆಲವು ಲಕ್ಷಣಗಳು ಸಾಮಾನ್ಯ. ಆಗಾಗ ಇನ್ಫೆಕ್ಷನ್ಗಳಾಗುವುದು, ರೋಗ ನಿರೋಧಕತೆ ಕಡಿಮೆಯಾಗುವುದು, ಆಗಾಗ ನೆಗಡಿ, ಶೀತ ಬರುವುದು ಇತ್ಯಾದಿಗಳೂ ವಿಟಮಿನ್ ಡಿಯ ಕೊರತೆಯ ಲಕ್ಷಣಗಳು. ಮೂಳೆಯಲ್ಲಿ ಶಕ್ತಿ ಇಲ್ಲದಂತಾಗುವುದು ಕೂಡಾ ಇದರ ಪ್ರಮುಖ ಲಕ್ಷಣ. ಖಿನ್ನತೆಯೂ ಕೂಡಾ ವಿಟಮಿನ್ ಡಿಯ ಕೊರತೆಯಿಂದ ಬರುವ ಸಂಭವವಿದೆ. ವಿಟಮಿನ್ ಡಿ ನಮ್ಮ ಆಹಾರದಲ್ಲಿರುವ ಕ್ಯಾಲ್ಶಿಯಂ ಅನ್ನು ದೇಹಕ್ಕೆ ಸರಿಯಾಗಿ ಒದಗಿಸುವ ಕೆಲಸವನ್ನು ಮಾಡುವುದರಿಂದ ಕ್ಯಾಲ್ಶಿಯಂ ದೇಹಕ್ಕೆ ಸೇರುವ ಪ್ರಕ್ರಿಯೆ ನಿಂತುಹೋಗುತ್ತದೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಶಿಯಂ ಸಿಗದೇ, ಮೂಳೆಗಳು ಶಕ್ತಿ ಕಳೆದುಕೊಳ್ಳುತ್ತವೆ.
ಆರೋಗ್ಯಕರ ಜೀವನಶೈಲಿ
ಖಿನ್ನತೆ ಎಂಬುದು ಇತ್ತೀಚೆಗಿನ ಧಾವಂತದ ಜೀವನಕ್ರಮದಲ್ಲಿ ಸಾಮಾನ್ಯ. ಆರೋಗ್ಯಕರ ಜೀವನಶೈಲಿ ಅತ್ಯಂತ ಮುಖ್ಯವಾದುದು. ನಮ್ಮ ಕೆಲಸಗಳು ನಮ್ಮನ್ನು ಹೊರಜಗತ್ತಿನಿಂದ, ಚಟುವಟಿಕೆಗಳಿಂದ ದೂರ ಮಾಡುತ್ತಿರುವುದರಿಂದ ಮಾನಸಿಕವಾಗಿ ದುರ್ಬಲರಾಗುತ್ತಿದ್ದೇವೆ. ಒತ್ತಡಗಳು ಮನಸ್ಸನ್ನು ಹೈರಾಣಾಗಿಸುತ್ತವೆ. ನಿತ್ಯವೂ ನಡಿಗೆ, ವ್ಯಾಯಾಮ, ಯೋಗ, ಧ್ಯಾನದಂತಹ ಚಟುವಟಿಕೆಗಳನ್ನೂ ರೂಢಿಸಿಕೊಳ್ಳುವುದರಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನೂ ಸರಿಯಾಗಿಟ್ಟುಕೊಳ್ಳಬಹುದು. ಆರೋಗ್ಯ ಚೆನ್ನಾಗಿದ್ದರೆ ಸಂತೋಷ ಇಮ್ಮಡಿಸುತ್ತದೆ.