ಸ್ಯಾಂಡಲ್ವುಡ್ ನಟ ದರ್ಶನ್ ಅಭಿಮಾನಿಗಳು ಹಾಗೂ ಅರಣ್ಯಾಧಿಕಾರಿಗಳ ಮಧ್ಯೆ ಇದೀಗ ಮೈಸೂರು ದಸರಾ ಅಂಬಾರಿ ಆನೆ ಅರ್ಜುನನ ಸಮಾಧಿ ಗಲಾಟೆ ಶುರುವಾಗಿದೆ. ಮೃತ ಅರ್ಜುನ ಆನೆ ಸಮಾಧಿ ನಿರ್ಮಾಣಕ್ಕೆ ದರ್ಶನ್ ಮುಂದಾಗಿದ್ದು, ಧನಸಹಾಯ ಮಾಡಿದ್ದಾರೆ. ಆದರೆ ಈ ವಿಚಾರದಲ್ಲಿ ಅರಣ್ಯಾಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ದರ್ಶನ್ ಇತ್ತೀಚೆಗೆ ಅರ್ಜುನ ಆನೆ ಸಮಾಧಿ ನಿರ್ಮಾಣ ಮಾಡಲು ಸ್ವಂತ ಹಣ ಖರ್ಚು ಮಾಡಿ ಸ್ಲ್ಯಾಬ್ ಕಲ್ಲುಗಳನ್ನು ಕಳುಹಿಸಿ ಕೊಟ್ಟಿದ್ದರು. ಅರಣ್ಯಾಧಿಕಾರಿಗಳಿಂದ ಅನುಮತಿ ಸಿಕ್ಕ ಬಳಿಕವೇ ದರ್ಶನ್ ಅಭಿಮಾನಿಗಳು ಕೆಲಸ ಪ್ರಾರಂಭಿಸಿದ್ದರು. ಆದರೆ ಅರ್ಜುನನ ಸ್ಮಾರಕ ನಿರ್ಮಿಸುವ ಕೆಲಸದ ವೇಳೆ, ಅರಣ್ಯಾಧಿಕಾರಿಗಳು ತಡೆದರು. ಬಳಿಕ ತಾವೇ ಅರ್ಜುನನ ಸ್ಮಾರಕ ನಿರ್ಮಾಣ ಮಾಡೋದಾಗಿ ಹೇಳಿ ಅಲ್ಲಿಂದ ದರ್ಶನ್ ಅಭಿಮಾನಿಗಳನ್ನು ಕಳುಹಿಸಿದ್ದರು. ಹಣವನ್ನು ಹಿಂದಿರುಗಿಸೋದಾಗಿ ಕೂಡ ಹೇಳಿದ್ದರು ಎಂದು ವಿಡಿಯೋ ಮೂಲಕ ದರ್ಶನ್ ಆಪ್ತ ನಾಗರಾಜ್ ತಿಳಿಸಿದ್ದಾರೆ.
ಇದುವರೆಗೂ ನಮ್ಮ ಖಾತೆಗೆ ಹಣ ಬಂದಿಲ್ಲ. ನಮಗೆ ನಿಮ್ಮ ಹಣ ಬೇಕಿಲ್ಲ. ಮೊದಲು ಅನುಮತಿ ಕೊಟ್ಟು ಬಳಿಕ ನಾವೇ ಮಾಡ್ತೀವಿ ಅಂತೀರಿ ಎಂದು ಅರಣ್ಯಾಧಿಕಾರಿಗಳ ವಿರುದ್ಧ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.