ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದ ನಟ ವಿನಾಯಕನ್ ಅವರನ್ನು ಪೊಲೀಸರು ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ವಿನಾಯಕನ್ ಬಂಧನದ ಸುದ್ದಿ ತಿಳಿದು ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಷ್ಟಕ್ಕೂ ವಿನಾಯಕನ್ ಅವರನ್ನು ಪೊಲೀಸರು ಬಂಧಿಸಿದ್ದೇಕೆ ಗೊತ್ತಾ?
ಮಲಯಾಳಂ ಖ್ಯಾತ ನಟ ವಿನಾಯಕನ್ ವಿಮಾನ ನಿಲ್ದಾಣದಲ್ಲಿ ಕುಡಿದು ಗಲಾಟೆ ಮಾಡುತ್ತಿದ್ದರಂತೆ. ಅವರ ಕುಡಿದ ಅಮಲಿನಲ್ಲಿ ತೂರಾಡುತ್ತಿದ್ದ ಅವರನ್ನು ಕಂಡ ಭದ್ರತಾ ಪಡೆಗಳು ದೌಡಾಯಿಸಿದ್ದರು. ಇದೇ ವೇಳೆ ಭದ್ರತಾ ಸಿಬ್ಬಂದಿಗೆ ಸ್ಟಾರ್ ನಟ ಎಂದು ಗೊತ್ತಾಗಿದೆ.
ಆ ಕೂಡಲೇ ಮದ್ಯ ಸೇವಿಸಿ ವಿಮಾನ ನಿಲ್ದಾಣದಲ್ಲಿ ತುರಾಡುತ್ತಿದ್ದ ವಿನಾಯಕನ್ ಅವರನ್ನು ತಪಾಸಣೆಗೆ ಒಳಪಡಿಸಲು ಮುಂದಾಗಿದ್ದಾರಂತೆ. ಆದರೆ ಈ ವೇಳೆ ನಟ CISF (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ಜೊತೆಗೆ ವಾಗ್ವಾದ ನಡೆಸಿ, ಭದ್ರತಾ ತಪಾಸಣೆಗೆ ಅಡ್ಡಿಪಡಿಸಿದ್ದಾರೆ.
ಘಟನೆಯ ಬಳಿಕ ವಿನಾಯಕನ್ ಠಾಣೆಗೆ ಕರೆದೊಯ್ದಿದ್ದು ವಿಚಾರಣೆಗೆ ಒಳಪಡಿಸಲಾಗಿದೆ. ಈ ಘಟನೆ ಸಂಬಂಧ ತನಿಖೆ ನಡೆಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸಾರ್ವಜನಿಕರಿಗೆ ಮಾದರಿಯಾಗಬೇಕಾದ ನಟರೇ ಈ ರೀತಿ ಮಾಡಿದ್ರೆ ಉಳಿದವರ ಗತಿ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ.