ಅಗರ್ತಲ: ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ 16 ಬಾಂಗ್ಲಾದೇಶದ (Bangladesh) ಪ್ರಜೆಗಳನ್ನು ಪೊಲೀಸರು ಬಂಧಿಸಿದ ಘಟನೆ ತ್ರಿಪುರಾದ (Tripura) ಅಗರ್ತಲಾ ರೈಲ್ವೆ ನಿಲ್ದಾಣದಲ್ಲಿ (Agartala Railway Station) ನಡೆದಿದೆ.
ಬಂಧಿತರಲ್ಲಿ ಮೂವರು ಮಹಿಳೆಯರು. 16 ಬಾಂಗ್ಲಾದೇಶಿ ಪ್ರಜೆಗಳನ್ನು ಮಂಗಳವಾರ ರಾತ್ರಿ ಅಗರ್ತಲಾ ರೈಲು ನಿಲ್ದಾಣದಿಂದ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್ಪಿ) ರೈಲು ಹತ್ತುವ ಮೊದಲು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಗರ್ತಲಾ ರೈಲು ನಿಲ್ದಾಣವು ಬಾಂಗ್ಲಾದೇಶದ ಗಡಿಯಿಂದ ಸುಮಾರು 6 ಕಿ.ಮೀ ದೂರದಲ್ಲಿದೆ. ಬಂಧಿತರು ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಲು ಮತ್ತು ಉದ್ಯೋಗದ ಹುಡುಕಾಟದಲ್ಲಿ ಭಾರತಕ್ಕೆ ಪ್ರವೇಶಿಸಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ.
20 ರಿಂದ 40 ವರ್ಷ ವಯಸ್ಸಿನ 16 ಬಾಂಗ್ಲಾದೇಶೀಯರಲ್ಲಿ ಹದಿಮೂರು ಮಂದಿ ರಾಜಶಾಹಿ ವಿಭಾಗದ ಚಪೈನವಾಬ್ಗಂಜ್ ಜಿಲ್ಲೆಯ ನಿವಾಸಿಗಳಾಗಿದ್ದರೆ, ಉಳಿದ ಮೂವರು ಢಾಕಾ ವಿಭಾಗದ ಗಾಜಿಪುರ ಜಿಲ್ಲೆಯ ನಿವಾಸಿಗಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.