ಹೊಸದಿಲ್ಲಿ: ಸೇನೆ ಹಾಗೂ ಅರೆಸೇನೆ ನಡುವೆ ಸುಡಾನ್ ನಲ್ಲಿ ನಡೆಯುತ್ತಿರುವ ಯುದ್ಧ ಇಂದಿಗೂ ಮುಂದುವರೆದಿದೆ. ಸುಡಾನ್ ನಲ್ಲಿ ಸಿಲುಕಿರುವ ಸಾಕಷ್ಟು ಭಾರತೀಯರನ್ನು ಅಪರೇಷನ್ ಕಾವೇರಿ ಅಡಿಯಲ್ಲಿ ಕರೆತರಲಾಗುತ್ತಿದ್ದು ಇದೀಗ 186 ಮಂದಿ ಭಾರತೀಯರು ತಾಯ್ನಾಡಿಗೆ ಆಗಮಿಸಿದ್ದಾರೆ.
ಸುಡಾನ್ ನಿಂದ ಸೋಮವಾರ ಹೊಸತಾಗಿ 186 ಮಂದಿಯನ್ನು ಸುರಕ್ಷಿತವಾಗಿ ಕೊಚ್ಚಿಗೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈವರೆಗೆ ಸುರಕ್ಷಿತವಾಗಿ ತಲುಪಿದ ಭಾರತೀಯರ ಸಂಖ್ಯೆ 2,140ಕ್ಕೆ ಏರಿಕೆಯಾಗಿದೆ. ಇದೇ ವೇಳೆ 17ನೇ ತಂಡದಲ್ಲಿ 135 ಮಂದಿಯ ತಂಡ ಜೆಡ್ಡಾದಿಂದ ಭಾರತದತ್ತ ಪ್ರಯಾಣ ಬೆಳೆಸಿದೆ ಎಂದೂ ಬರೆದುಕೊಂಡಿದ್ದಾರೆ.
ಇನ್ನೊಂದೆಡೆ “ಆಪರೇಶನ್ ಕಾವೇರಿ’ಯ ಅನ್ವಯ ಸೌದಿ ಅರೇಬಿಯಾದಿಂದ ಭಾರತೀಯರನ್ನು ಕರೆತರಲು ಹೆಚ್ಚುವರಿಯಾಗಿ ವಿಮಾನಗಳ ಸಂಚಾರ ನಡೆಸಲು ಸ್ಪೈಸ್ಜೆಟ್ ಮುಂದಾಗಿದೆ.