ನವದೆಹಲಿ: ಲೋಕಸಭಾ ಚುನಾವಣೆ ಹಾಗೂ ಮತ ಎಣಿಕೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ದಿನಾಂಕದಲ್ಲಿ ಬದಲಾವಣೆ ಮಾಡಿದೆ. ಏಪ್ರಿಲ್ 19ರಿಂದ ಮತದಾನ ಆರಂಭವಾಗಲಿದ್ದು,
ಜೂನ್ 4ರಂದು ಮತ ಎಣಿಕೆ ಕಾರ್ಯ ನಡೆಸುವುದಾಗಿ ಕೇಂದ್ರ ಚುನಾವಣಾ ಲಾವಣ್ಯ ಆಯೋಗ ತಿಳಿಸಿದೆ. ಆದರೆ ಇದೀಗ ಅರುಣಾಚಲ ಹಾಗೂ ಸಿಕ್ಕಿಂ ವಿಧಾನಸಭೆ ಚುನಾವಣೆಯ ಮತ ಎಣಿಕೆಯನ್ನು ಜೂ.4ರ ಬದಲು ಜೂ.2ರಂದು ನಡೆಸುವಂತೆ ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ವಿಧಾನಸಭೆಯ ಅವಧಿ ಜೂನ್ 2ರಂದು ಮುಕ್ತಾಯಗೊಳ್ಳುವ ಹಿನ್ನೆಲೆ ಈ ಮಹತ್ತರ ಬದಲಾವಣೆ ತರಲಾಗಿದೆ. ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ವಿಧಾನಸಭೆಗೆ ಏಪ್ರಿಲ್ 19ರಂದು ಒಂದೇ ಹಂತದ ಮತದಾನ ನಡೆಯಲಿದೆ. ಇನ್ನು ಅರುಣಾಚಲ ಮತ್ತು ಸಿಕ್ಕಿಂ ಲೋಕಸಭಾ ಕ್ಷೇತ್ರಗಳ ಫಲಿತಾಂಶ ದಿನಾಂಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.