ಬೆಳಗಾವಿ: ವಿಧಾನಸಭೆ ಚುನಾವಣೆಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಸೋತಿದ್ದೇವೆ ಆ ಬಗ್ಗೆ ಕುಂಟು ನೆಪ ಹೇಳಲ್ಲ ಎಂದು ಅಥಣಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಸೋಲು ಸ್ವೀಕಾರ ಮಾಡುತ್ತೇವೆ, ಹೊಸ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಪರೋಕ್ಷವಾಗಿ ಲಕ್ಷ್ಮಣ್ ಸವದಿಗೆ ಅಭಿನಂದನೆ ಸಲ್ಲಿಸಿದರು. ಅವರು ಕಾಂಗ್ರೆಸ್ ಸೇರುವಾಗ ಅಥಣಿ ಅಭಿವೃದ್ಧಿಗಾಗಿ ಕಾಂಗ್ರೆಸ್ ಸೇರುತ್ತೇವೆ ಅಂದಿದ್ದರು. ಅಭಿವೃದ್ಧಿ ಮಾಡಲಿ ನಾವು ಸಹಕಾರ ಕೊಡುತ್ತೇವೆ ಎಂದರು.
ರಾಜ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳ ಘೋಷಣೆ ವಿಚಾರವಾಗಿ ಮಾತನಾಡಿದ ಅವರು, ನನಗೆ ತಿಳಿದ ಮಟ್ಟಿಗೆ ಅವರು ನಕ್ಕಿ ಮೋಸ ಮಾಡುತ್ತಾರೆ. ನನ್ನ ರಾಜಕೀಯ ಅನುಭವ ಪ್ರಕಾರ ಲೋಕಸಭೆ ಚುನಾವಣೆವರೆಗೆ ಗುದ್ದಾಡಿ ಕೊಡುತ್ತಾರೆ, ಮುಂದೆ ಕೈ ಎಬಿಸುತ್ತಾರೆ. ಎಲ್ಲಾ ಅಭಿವೃದ್ಧಿ ಕಾರ್ಯ ಬಂದ್ ಮಾಡಿ ಬರೀ ಅದನ್ನೇ ಮಾಡಬೇಕಾಗುತ್ತದೆ. ಇದರಿಂದ ರಾಜ್ಯದ ಅಭಿವೃದ್ಧಿ ಕಾರ್ಯ ಕುಂಠಿತ ಆಗುತ್ತದೆ ಎಂದರು.