ಹುಬ್ಬಳ್ಳಿ: ಹಿಂದುಗಳ ಬಹು ದೊಡ್ಡ ಹಬ್ಬ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆ. 25, 26 & 27ರಂದು ರಾಯಾಪುರ ಬಳಿಯ ಹುಬ್ಬಳ್ಳಿ ಧಾರವಾಡ ಇಸ್ಕಾನ್ನಲ್ಲಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ರಾಜೀವ ಲೋಚನದಾಸ ತಿಳಿಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಸ್ಕಾನ್ ಮಂದಿರದಲ್ಲಿ ಅಂದು ಇಡೀ ದಿನ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಸುಮಾರು 60 ಸಾವಿರ ಭಕ್ತರು ಶ್ರೀ ಕೃಷ್ಣ ಬಲರಾಮರ ದರ್ಶನಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಉತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ವಿದ್ಯುತ್ ದೀಪ, ಪರಿಮಳಯುಕ್ತ ಹೂಗಳಿಂದ ಅಲಂಕೃತಗೊಳಿಸಲಾಗುತ್ತದೆ. ಅಂದು ಬೆಳಗ್ಗೆ 4.30ಕ್ಕೆ ಕೃಷ್ಣ ಬಲರಾಮರಿಗೆ ಮಂಗಳಾರತಿಯೊಂದಿಗೆ ಜನ್ಮಾಷ್ಟಮಿ ಕಾರ್ಯಕ್ರಮ ಆರಂಭವಾಗಲಿವೆ. ವಿಶೇಷ ಅಲಂಕಾರ ನಡೆಯಲಿದೆ.
ಬೆಳಗ್ಗೆ 7.30ಕ್ಕೆ ಶೃಂಗಾರ ಆರತಿ ಮುಖಾಂತರ ದೇವಸ್ಥಾನದಲ್ಲಿ ದರ್ಶನಕ್ಕೆ ಮುಕ್ತಗೊಳಿಸಲಾಗುತ್ತದೆ. ಮಧ್ಯರಾತ್ರಿವರೆಗೂ ಅನೇಕ ಭಕ್ತರು ಉಪವಾಸ ವ್ರತ ಕೈಗೊಳ್ಳುವರು. ವಿವಿಧ ರೀತಿಯ ಸೇವೆಗಳನ್ನು ಸಲ್ಲಿಸುವರು ಎಂದರು.
ದೇವಸ್ಥಾನದ ಮುಖ್ಯಸಭಾಂಗಣದಲ್ಲಿ ಬೆಳಗ್ಗೆ 8ರಿಂದ ಅರ್ಚನೆ, ಆರತಿಗಳು ನಿರಂತರವಾಗಿ ನಡೆಯಲಿವೆ. ಬೆಳಗ್ಗೆ 10.30ಕ್ಕೆ ಲಡ್ಡು ಗೋಪಾಲನಿಗೆ ತೊಟ್ಟಿಲೋತ್ಸವ ಜರುಗುವುದು. ಶ್ರೀ ಕೃಷ್ಣ ಬಲರಾಮರಿಗೆ 108 ಬಗೆಯ ಭಕ್ಷ್ಯಗಳನ್ನು ನೈವೇದ್ಯವಾಗಿ ಅಪಿರ್ಸಲಾಗುವುದು. ನಂತರ ಭಕ್ತರ ದರ್ಶನಕ್ಕೆ ಇಡಲಾಗುವುದು. ದಿನದ ಕೊನೆಗೆ ಭಕ್ತರಿಗೆ ಪ್ರಸಾದ ನೀಡಲಾಗುವುದು.
ಉತ್ಸವಕ್ಕೆ ಹೆಚ್ಚಿನ ಮೆರಗು ನೀಡುವ ಸಲುವಾಗಿ ಮಕ್ಕಳು, ಕಲಾವಿದರಿಂದ ಸಾಂಸತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ರಾತ್ರಿ 9.30ಕ್ಕೆ ಮಹಾ ಅಭಿಷೇಕ ಪ್ರಾರಂಭವಾಗಲಿದೆ. ಶ್ರೀ ಕೃಷ್ಣನ ಜನ್ಮದ ಮಹತ್ವವನ್ನು ಸಾರುವ ಮಹಾಭಿಷೇಕವು ಮಂಗಳಾರತಿಯೊಂದಿಗೆ ಮಧ್ಯರಾತ್ರಿ 12ಕ್ಕೆ ಸಮಾರೋಪಗೊಳ್ಳಲಿದೆ ಎಂದರು.
ಬಸ್ ಸೌಲಭ್ಯ: ಇಡೀ ದಿನ ಹಾಗೂ ಮಧ್ಯರಾತ್ರಿವರೆಗೂ ಜನ್ಮಾಷ್ಟಮಿ ಉತ್ಸವ ನಡೆಯುವ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ ಸೌಲಭ್ಯಗಳನ್ನು ನೀಡುವಂತೆ ಆಯಾ ಸಂಸ್ಥೆಯವರಿಗೆ ಕೋರಲಾಗಿದೆ. ಭಕ್ತರು ಇದರ ಪ್ರಯೋಜನ ಪಡೆಯಬೇಕು. ದೇವಸ್ಥಾನದ ಬಳಿ ಮೂರು ಕಡೆ ವಾಹನಗಳಿಗೆ ಪಾಕಿರ್ಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ರಾಜಗೋಪಾಲ್ ದಾಸ್ ಇದ್ದರು.