ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ನಲ್ಲಿ ದರ್ಶನ್ ಕ್ರೂರತ್ವ ಬಯಲಾಗಿದ್ದು ಅವರಿಗೆ ಕಾನೂನಿನ ಸಂಕಷ್ಟ ಹೆಚ್ಚಾಗುತ್ತಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಎ2 ಆಗಿದ್ದು, ಅವರ ವಿರುದ್ಧ ನೂರಾರು ಸಾಕ್ಷಿಗಳು ಪೊಲೀಸರಿಗೆ ಸಿಕ್ಕಿವೆ. ಬೆಂಗಳೂರಿನಲ್ಲಿ ಚಾರ್ಜ್ಶೀಟ್ ಸಲ್ಲಿಕೆ ಆಗುತ್ತಿದ್ದಂತೆಯೇ ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ಅವರು ಕುಟುಂಬದವರ ಭೇಟಿಗೆ ಮನವಿ ಮಾಡಿದ್ದಾರೆ. ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಫ್ಯಾಮಿಲಿ ಜೊತೆ ಚರ್ಚಿಸಲು ದರ್ಶನ್ ಬಯಸಿದ್ದಾರೆ ಎನ್ನಲಾಗುತ್ತಿದೆ.
ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ಅವರು ಪ್ರಿಸನ್ ಕಾಲ್ ಸಿಸ್ಟಮ್ ಮೂಲಕ ಕುಟುಂಬದವರಿಗೆ ದೂರವಾಣಿ ಕರೆ ಮಾಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಜೊತೆ ಸುಮಾರು 5 ನಿಮಿಷಗಳ ಕಾಲ ಮಾತನಾಡಿದ್ದಾರೆ. ಮುಂದಿನ ಕಾನೂನು ಹೋರಾಟದ ಬಗ್ಗೆಯೇ ಪತ್ನಿ ಜೊತೆ ಅವರು ಚರ್ಚೆ ಮಾಡಿದ್ದಾರೆ. ಪತ್ನಿ ಜೊತೆ ಮಾತನಾಡುವಾಗ ಅವರು ಭಾವುಕರಾಗಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಗಿದಿದೆ. 3991 ಪುಟಗಳು ಇರುವ ಜಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಆರೋಪಗಳು ಗಂಭೀರ ಆಗಿರುವುದರಿಂದ ದರ್ಶನ್ಗೆ ಜಾಮೀನು ಸಿಗುವುದು ಕಷ್ಟ ಇದೆ. ಮುಂದಿನ ಕಾನೂನು ಹೋರಾಟದ ಬಗ್ಗೆ ಕೇವಲ 5 ನಿಮಿಷ ಫೋನ್ ಕಾಲ್ನಲ್ಲಿ ಮಾತನಾಡಲು ದರ್ಶನ್ಗೆ ಸಾಧ್ಯವಾಗಿಲ್ಲ. ಆದ್ದರಿಂದ ಪತ್ನಿ ಮತ್ತು ತಾಯಿ ಜೊತೆ ನೇರವಾಗಿ ಮಾತನಾಡಲು ಅವರು ತೀರ್ಮಾನಿಸಿದ್ದಾರೆ.
ನಾಳೆಯೇ (ಸೆಪ್ಟೆಂಬರ್ 11) ಜೈಲಿಗೆ ಬರುವಂತೆ ಪತ್ನಿಗೆ ದರ್ಶನ್ ತಿಳಿಸಿದ್ದಾರೆ. ಈ ಬಗ್ಗೆ ದರ್ಶನ್ ಕುಟುಂಬಸ್ಥರು ಬಳ್ಳಾರಿಯ ಜೈಲಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಮತ್ತು ತಾಯಿ ಮೀನಾ ಕೂಡ ಬರುವುದಾಗಿ ಮಾಹಿತಿ ನೀಡಿದ್ದಾರೆ. ದರ್ಶನ್ ಕುಟುಂಬದವರು ಸಂಜೆ 4 ಗಂಟೆಯ ನಂತರ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬರುವ ಸಾಧ್ಯತೆ ಇದೆ.