ಬೆಂಗಳೂರು: ಅಶೋಕ್ ಅವರೇ ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಅದನ್ನ ಮೊದಲು ತೆಗೆದುಕೊಳ್ಳಿ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅಶೋಕ್ ಅವರು ವಿಪಕ್ಷಗಳ ನಾಯಕ. ಅವರು ನಿತ್ಯ ಏನಾದರೂ ಹೇಳಬೇಕು. ಇಲ್ಲದೇ ಹೋದರೆ ಮೇಲಿನವರು ಏನು ಮಲಗಿದ್ದೀರಾ ಎಂದು ಕೇಳುತ್ತಾರೆ.
ಹೀಗಾಗಿ ಸುದ್ದಿಯಲ್ಲಿ ಇರಬೇಕು ಎಂದು ಈ ರೀತಿಯಾಗಿ ಹೇಳುತ್ತಾರೆ. ಅಶೋಕ್ ಅವರೇ ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಅದನ್ನ ಮೊದಲು ತೆಗೆದುಕೊಳ್ಳಿ. ಅವರ ತಟ್ಟೆಯ ನೊಣದ ಬಗ್ಗೆ ಯಾಕೆ ಚಿಂತೆ ಮಾಡ್ತೀರಾ? ನಿಮ್ಮ ಪಕ್ಷದಲ್ಲಿ ಏನು ನಡೆದಿದೆ ನೋಡಿಕೊಳ್ಳಿ. ಬೇರೆ ಪಕ್ಷದ ಬಗ್ಗೆ ಮಾತಾಡುವ ಯಾವ ನೈತಿಕತೆ ನಿಮಗಿದೆ ಎಂದು ಕಿಡಿಕಾರಿದರು.
ವಿಪಕ್ಷ ನಾಯಕ ಆಗಿ ಅವರ ಪಕ್ಷ ಸರಿ ಮಾಡಿಕೊಳ್ಳೋ ಬಗ್ಗೆ ಅಶೋಕ್ ಗಮನ ಕೊಡಲಿ. ನಿನ್ನ ಟೆಂಟ್ ಕಿತ್ತು ಹೊರಟಿದೆ. ಬೇರೆಯವರ ಟೆಂಟ್ ಬಗ್ಗೆ ಯಾಕೆ ಆಲೋಚನೆ ಮಾಡ್ತೀಯಾ? ಬಿಜೆಪಿಯಲ್ಲಿ ಅಧ್ಯಕ್ಷನ ಜೊತೆಗೆ ವಿಪಕ್ಷ ನಾಯಕನ ಬದಲಾವಣೆ ಬಗ್ಗೆಯೂ ಚರ್ಚೆ ಆಗ್ತಿದೆ.
ಬಿಜೆಪಿಯಲ್ಲಿ ಅಧ್ಯಕ್ಷರು ಬದಲಾವಣೆ ಆದ ಸಮಯದಲ್ಲಿ ವಿಪಕ್ಷ ನಾಯಕ ಬದಲಾವಣೆ ಆಗಬೇಕು ಅಂತ ಚರ್ಚೆ ನಡೆದಿದೆ. ಬಿಜೆಪಿಯಲ್ಲಿ ಬಹಳಷ್ಟು ಸ್ನೇಹಿತರು ನನಗೆ ಇದ್ದಾರೆ. ಅವರೇ ಹೇಳಿದ್ದಾರೆ. ಬಿಜೆಪಿಯಲ್ಲಿ ಎರಡು ಕುರ್ಚಿ ಮೇಲೆ ಟವಲ್ ಹಾಕಿ ಕೂತಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ಜನರ ದಿಕ್ಕು ಬೇರೆಡೆಗೆ ಸೆಳೆಯಲು ಹೀಗೆ ಮಾತಾಡ್ತಿದ್ದಾರೆ. ಅಶೋಕ್ ಅಣ್ಣ ನಿನ್ನ ಸೀಟನ್ನು ಭದ್ರವಾಗಿ ಇಟ್ಟುಕೋ, ಆಮೇಲೆ ಬೇರೆ ಅವರ ಸೀಟಿನ ಬಗ್ಗೆ ಚರ್ಚೆ ಮಾಡಿ ವ್ಯಂಗ್ಯವಾಡಿದರು.