ಲಖನೌ: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನ ಕೊಲೆ ಮಾಡುವುದಾಗಿ ಮಾಧ್ಯಮ ಸಂಸ್ಥೆಯೊಂದಕ್ಕೆ ಬೆದರಿಕೆ ಇ-ಮೇಲ್ ಕಳುಹಿಸಿದ ಅಪ್ರಾಪ್ತ ಬಾಲಕನನ್ನು ನೋಯ್ಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಹಾರ ಮೂಲದ 16 ವರ್ಷದ ಬಾಲಕ ಈ ಕೃತ್ಯ ಎಸಗಿದ್ದಾನೆ. ಸದ್ಯ ಬಾಲಕನನ್ನು ಲಖನೌನಲ್ಲಿ ಬಂಧಿಸಿ ನೋಯ್ಡಾಗೆ ಕರೆತರಲಾಗಿದೆ.
ಪ್ರಕರಣ ಸಂಬಂಧ ಏ. 5 ರಂದು ನೋಯ್ಡಾ 20ನೇ ಸೆಕ್ಟರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ವೇಳೆ ಲಖನೌನಿಂದ ಇ-ಮೇಲ್ ಬಂದಿರುವುದು ಗೊತ್ತಾಗಿತ್ತು.
ಲಖನೌನ ಚಿನ್ನತ್ ಪ್ರದೇಶದಿಂದ ಬಾಲಕನನ್ನು ಬಂಧಿಸಲಾಗಿದೆ. 12 ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನೋಯ್ಡಾದ ಬಾಲಪರಾಧಿ ನ್ಯಾಯಾಲಯಕ್ಕೆ ಬಾಲಕನನ್ನು ಹಾಜರಿಪಡಿಸಲಾಗಿದ್ದು, ಪ್ರಕ್ರಿಯೆಗಳು ಜಾರಿಯಲ್ಲಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.