ಬೆಂಗಳೂರು:- ಹೆಲ್ಮೆಟ್ ವಿಚಾರಕ್ಕೆ ವಕೀಲನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೈಕೋರ್ಟ್ ಪೀಠವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.
ಹೆಲ್ಮೆಟ್ ಹಾಕದ ಕಾರಣಕ್ಕೆ ಅಮಾನುಷ ಹಲ್ಲೆ ಆಘಾತಕಾರಿ ಎಂದು ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ, ಕೃಷ್ಣ ಎಸ್. ದೀಕ್ಷಿತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಗರಿಕ ಸಮಾಜದಲ್ಲಿ ಇಂತಹ ಘಟನೆಗಳು ನಡೆಯಬಾರದು. ವಕೀಲರಿಗೇ ಹೀಗಾದರೆ ಜನಸಾಮಾನ್ಯರ ಕಥೆ ಏನು? ಹೆಲ್ಮೆಟ್ ಹಾಕದ ಕಾರಣಕ್ಕೆ ಹೀಗೆ ಹಲ್ಲೆ ನಡೆಸಬಹುದೇ? ಎಂದು ಪ್ರಶ್ನಿಸಿದ ಹೈಕೋರ್ಟ್, ಈ ಪ್ರಕರಣದ ಬಗ್ಗೆ ಕೈಗೊಂಡ ಕ್ರಮದ ಮಾಹಿತಿ ನೀಡಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಹಲ್ಲೆ ಕಾರಣಕ್ಕೆ ಕೋರ್ಟ್ ಬಹಿಷ್ಕರಿಸದಂತೆ ವಕೀಲರಿಗೂ ಹೈಕೋರ್ಟ್ ಮನವಿ ಮಾಡಿದ್ದು, ವಕೀಲರು ಟ್ರೇಡ್ ಯೂನಿಯನ್ ರೀತಿ ಕೋರ್ಟ್ ಬಹಿಷ್ಕರಿಸಬಾರದು. ಕಾನೂನು ರೀತ್ಯಾ ಕ್ರಮಕ್ಕೆ ಮುಂದಾಗುವಂತೆ ಹೈಕೋರ್ಟ್ ಸೂಚಿಸಿದೆ. ಇನ್ನು ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ತಪ್ಪಿತಸ್ಥ ಪೊಲೀಸರನ್ನು ಅಮಾನತುಗೊಳಿಸಿರುವುದಾಗಿ ಹೈಕೋರ್ಟ್ ಗೆ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ಮಾಹಿತಿ ನೀಡಿದ್ದಾರೆ.