ನವದೆಹಲಿ: ಲಸಿಕೆಯಿಂದ ಅಪರೂಪದ ಅಡ್ಡಪರಿಣಾಮ ಉಂಟಾಗಬಹುದು ಎಂದು ಒಪ್ಪಿಕೊಂಡ ಬಳಿಕ ಕೋವಿಡ್ ಲಸಿಕೆಯನ್ನು ಜಾಗತಿಕವಾಗಿ ಹಿಂತೆಗೆದುಕೊಳ್ಳಲು ಅಸ್ಟ್ರಾಜೆನೆಕಾ ಆರಂಭಿಸಿದೆ. ವಾಣಿಜ್ಯ ಕಾರಣಗಳಿಗಾಗಿ ಲಸಿಕೆಯನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲಾಗುತ್ತಿದೆ. ಲಸಿಕೆಯನ್ನು ಇನ್ಮುಂದೆ ತಯಾರಿಸಲಾಗುವುದಿಲ್ಲ ಅಥವಾ ಸರಬರಾಜು ಮಾಡಲಾಗುವುದಿಲ್ಲ ಎಂದು ಕಂಪನಿ ಹೇಳಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ನವೀಕರಿಸಿದ ಲಸಿಕೆಗಳ ಹೆಚ್ಚುವರಿಯಾಗಿ ಲಭ್ಯವಿದೆ. ಇದು ಲಸಿಕೆಗೆ ಬೇಡಿಕೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಕಂಪನಿ ತಿಳಿಸಿದೆ. ಕಂಪನಿಯು ತನ್ನ ಮಾರ್ಕೆಟಿಂಗ್ ಅಧಿಕಾರವನ್ನು ಸ್ವಯಂಪ್ರೇರಣೆಯಿಂದ ಹಿಂತೆಗೆದುಕೊಂಡಿರುವುದರಿಂದ ಲಸಿಕೆಯನ್ನು ಇನ್ಮುಂದೆ ಯುರೋಪಿಯನ್ ಒಕ್ಕೂಟದಲ್ಲಿ ಬಳಸಲು ಅಧಿಕೃತಗೊಳಿಸಲಾಗಿಲ್ಲ. ಹಿಂಪಡೆಯಲು ಅರ್ಜಿಯನ್ನು ಮಾರ್ಚ್ 5 ರಂದು ಸಲ್ಲಿಸಲಾಗಿತ್ತು. ಮಂಗಳವಾರದಿಂದ ಜಾರಿಗೆ ಬಂದಿದೆ.
ವ್ಯಾಕ್ಸಿವ್ರಿಯಾ (Vaxzervria Vaccine) ಎಂದು ಕರೆಯಲ್ಪಡುವ ಲಸಿಕೆಯನ್ನು ಈ ಹಿಂದೆ ಅನುಮೋದಿಸಿರುವ ಇತರ ದೇಶಗಳಲ್ಲಿಯೂ ಹಿಂತೆಗೆದುಕೊಳ್ಳಲು ಕಂಪನಿ ಅರ್ಜಿ ಸಲ್ಲಿಸಲಿದೆ. ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ರಕ್ತದ ಪ್ಲೇಟ್ಲೆಟ್ಗೆ ಕಾರಣವಾಗುವ ಅಪರೂಪದ ಅಡ್ಡ ಪರಿಣಾಮದಿಂದಾಗಿ ವ್ಯಾಕ್ಸೆವ್ರಿಯಾ ಲಸಿಕೆಯು ಜಾಗತಿಕ ಪರಿಶೀಲನೆಯಲ್ಲಿದೆ. ಫೆಬ್ರವರಿಯಲ್ಲಿ ಹೈಕೋರ್ಟ್ಗೆ ಸಲ್ಲಿಸಿದ ನ್ಯಾಯಾಲಯದ ದಾಖಲೆಗಳಲ್ಲಿ, ಲಸಿಕೆ ಅಪರೂಪದ ಸಂದರ್ಭಗಳಲ್ಲಿ ಅಡ್ಡಪರಿಣಾಮ ಉಂಟುಮಾಡಬಹುದು ಎಂದು ಅಸ್ಟ್ರಾಜೆನೆಕಾ ಒಪ್ಪಿಕೊಂಡಿತ್ತು.