ದಕ್ಷಿಣ ಬ್ರೇಜಿಲ್ ನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಪ್ರವಾಹ ಉಂಟಾಗಿದ್ದು ಜನ ಜೀವನ ಅಸ್ತವ್ಯಸ್ಥವಾಗಿದೆ. ಪ್ರವಾಹದಿಂದು ಇದುವರೆಗೂ 78 ಮಂದಿ ಮೃತಪಟ್ಟಿದ್ದು, ಬ್ರೆಜಿಲ್ನ ದಕ್ಷಿಣ ರಾಜ್ಯವಾದ ರಿಯೊ ಗ್ರಾಂಡೆ ಡೊ ಸುಲ್ನಲ್ಲಿ ಸುಮಾರು 105 ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದಿಂದಾಗಿ ಇದುವರೆಗೂ 1,15,000ಕ್ಕೂ ಹೆಚ್ಚು ಜನ ಸ್ಥಳಾಂತರಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಸಿದ ಮನೆಗಳು, ಸೇತುವೆಗಳು ಮತ್ತು ರಸ್ತೆಗಳ ಅವಶೇಷಗಳ ಕೆಳಗೆ ಸಿಲುಕಿರುವವರನ್ನು ಪತ್ತೆಹಚ್ಚಲು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. 3,000ಕ್ಕೂ ಹೆಚ್ಚು ಸೈನಿಕರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಇತರ ರಕ್ಷಕರಿಂದ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ನೀರು, ವಿದ್ಯುತ್ ಇಲ್ಲದೆ ಮನೆಗಳಲ್ಲಿ ಸಿಲುಕಿರುವ ಜನರ ರಕ್ಷಣೆ ಮಾಡಲಾಗುತ್ತಿದೆ. ಇದರೊಂದಿಗೆ ಸೇನಾ ಆಸ್ಪತ್ರೆ ಸ್ಥಾಪಿಸಿ ಜನರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರವಾಹದಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದ್ದು ರಸ್ತೆಗಳು ಬಂದ್ ಆಗಿವೆ. ರಿಯೊ ಗ್ರಾಂಡೆ ಡೊ ಸುಲ್ ಹೆಚ್ಚು ಪರಿಣಾಮ ಬೀರಿದೆ. ಈ ನಡುವೆ ಡಾಟ್ಕಾಂ ಎಂಬ ಕಂಪನಿಯ ಕಟ್ಟಡದಲ್ಲಿ ಕೆಲವರು ಸಿಲುಕಿಕೊಂಡು ಸಮಸ್ಯೆಗೀಡಾಗಿದ್ದಾರೆ. ಕಟ್ಟಡದಲ್ಲಿರುವ ಕೆಲವರು, ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ. ದುರಂತದ ಹವಾಮಾನ ಘಟನೆಯ ನಂತರ ಈ ಪ್ರದೇಶದಲ್ಲಿ ಗವರ್ನರ್ ಎಡ್ವರ್ಡೊ ಲೀಟ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ.
ನಾವು ಇತಿಹಾಸದಲ್ಲಿ ಅತ್ಯಂತ ಕೆಟ್ಟ ದುರಂತವನ್ನು ಎದುರಿಸುತ್ತಿದ್ದೇವೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಗವರ್ನರ್ ಲೀಟ್ ತಿಳಿಸಿದ್ದಾರೆ.