ವಾಷಿಂಗ್ಟನ್: ಮುಳುಗಡೆಗೊಂಡಿರುವ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಸಣ್ಣ ಜಲಾಂತರ್ಗಾಮಿ ಹಡಲು ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿದ್ದು, ಟೈಟಾನಿಕ್ ಸಬ್ಮೆರಿನ್ ಕಣ್ಮರೆಯಾಗಿರುವುದನ್ನು ಸ್ಕೈ ನ್ಯೂಸ್ ದೃಢಪಡಿಸಿದೆ.
ಘಟನೆಯ ಕುರಿತು ಮಾಹಿತಿ ನೀಡಿರುವ ಅಮೆರಿಕದ ಕರಾವಳಿ ಕಾವಲು ಪಡೆ, ಸಣ್ಣ ಜಲಾಂತರ್ಗಾಮಿ ಹಡಗು ಒಂದು ಬಾರಿ 5 ಜನರನ್ನು ಹೊತ್ತೊಯ್ಯಬಹುದು ಎನ್ನಲಾಗಿದ್ದು ಟೈಟಾನಿಕ್ ಹಡಗು ದುರಂತದ ಅವಶೇಷಗಳನ್ನು ವೀಕ್ಷಿಸುವ ಪೂರ್ಣ ಡೈವ್ ಸುಮಾರು 8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ನಾಪತ್ತೆಯಾಗಿರುವ ಜಲಾಂತರ್ಗಾಮಿ ಹಡಗಿನಲ್ಲಿ ಓಷನ್ಗೇಟ್ ಎಕ್ಸ್ಪೆಡಿಶನ್ಸ್ ಕಂಪನಿಗೆ ಸೇರಿದ್ದಾಗಿದ್ದು, ಅದರಲ್ಲಿ ಎಷ್ಟು ಜನರಿದ್ದರು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಸಿಬ್ಬಂದಿ ಸೇರಿ ಅದರಲ್ಲಿದ್ದ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
1912ರಲ್ಲಿ ದೈತ್ಯ ಟೈಟಾನಿಕ್ ಹಡಗು ತನ್ನ ಮೊದಲ ಪ್ರಯಾಣದಲ್ಲೇ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತು. ಈ ದುರಂತದಲ್ಲಿ 1,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಹಡಗಿನ ಅವಶೇಷವನ್ನು 1985ರಲ್ಲಿ ಕಂಡುಹಿಡಿಯಲಾಯಿತು. ಏಪ್ರಿಲ್ 10 ರಂದು, ಈ ಹಡಗು ಬ್ರಿಟನ್ನ ಸೌತಾಂಪ್ಟನ್ ಬಂದರಿನಿಂದ ನ್ಯೂಯಾರ್ಕ್ಗೆ ಪ್ರಯಾಣ ಬೆಳೆಸಿತ್ತು.