ಬೀದರ್: ಬಿಜೆಪಿ (BJP) ಮತ್ತು ಆರ್ಎಸ್ಎಸ್ (RSS) ಪ್ರಜಾಪ್ರಭುತ್ವದ (Democracy) ಮೇಲೆ ದಾಳಿ ನಡೆಸುತ್ತಿದ್ದು, ದೇಶದಲ್ಲಿ ದ್ವೇಷ ಮತ್ತು ಹಿಂಸಾಚಾರವನ್ನು ಹರಡುತ್ತಿವೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಕಿಡಿಕಾರಿದ್ದಾರೆ.
ಸೋಮವಾರ ಬೀದರ್ನ (Bidar) ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೀದರ್ ಬಸವಣ್ಣನವರ (Basavanna) ಕರ್ಮಭೂಮಿ. ಮೊದಲು ಪ್ರಜಾಪ್ರಭುತ್ವದ ಹಾದಿ ತೋರಿಸಿದ್ದೇ ಬಸವಣ್ಣನವರು. ಇಂದು ದೇಶದಾದ್ಯಂತ ಆರ್ಎಸ್ಎಸ್ ಮತ್ತು ಬಿಜೆಪಿಯವರು ಪ್ರಜಾಪ್ರಭುತ್ವದ ಮೇಲೆ ದಾಳಿ (Attack) ನಡೆಸುತ್ತಿರುವುದು ಬೇಸರದ ಸಂಗತಿ. ದೇಶದಲ್ಲಿ ಪ್ರಜಾಪ್ರಭುತ್ವನ್ನು ಕಾಪಾಡಿಕೊಳ್ಳಬೇಕೆಂದರೆ ನಾವೆಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು ಎಂದರು.
ಬಿಜೆಪಿ ಹಾಗೂ ಆರ್ಎಸ್ಎಸ್ ಹಿಂದೂಸ್ಥಾನದಲ್ಲಿ ದ್ವೇಷ ಮತ್ತು ಹಿಂಸಾಚಾರವನ್ನು ಹರಡುತ್ತಿದೆ. ಅಲ್ಲದೇ ಬಡ ಮತ್ತು ದುರ್ಬಲ ವರ್ಗದ ಜನರ ಹಣವನ್ನು ಕಿತ್ತುಕೊಂಡು ಶ್ರೀಮಂತರಿಗೆ ನೀಡುತ್ತಿದೆ. ಪ್ರತೀ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಣವನ್ನು ಠೇವಣಿ ಇಡುವುದು, ಕಪ್ಪು ಹಣದ ವಿರುದ್ಧ ಸಮರ ಸಾರುವುದು ಎಲ್ಲಾ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಭರವಸೆಗಳು ಸುಳ್ಳಾಗಿದೆ. ಕಾಂಗ್ರೆಸ್ ಈ ರೀತಿಯಾದ ಸುಳ್ಳು ಭರವಸೆಗಳನ್ನು ಜನರಿಗೆ ನೀಡುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಕೊಟ್ಟಿರುವ ಭರವಸೆಗಳನ್ನು ಈಡೇರಿಸಲಿದೆ ಎಂದರು.
ಕರ್ನಾಟಕದಲ್ಲಿ ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 150 ಸ್ಥಾನಗಳನ್ನು ಗೆದ್ದು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು. ಇದಕ್ಕೆ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿ
ಕಾಂಗ್ರೆಸ್ ಪಕ್ಷ ಜನರಿಗೆ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಹಾಗೂ ಯುವನಿಧಿ ಎಂಬ ನಾಲ್ಕು ಗ್ಯಾರಂಟಿಗಳನ್ನು ಘೋಷಿಸಿದೆ. ಕಾಂಗ್ರೆಸ್ ಆಡಳಿತಕ್ಕೆ ಬಂದ ನಂತರ ಸರ್ಕಾರದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಚುನಾವಣಾ (Election) ಸಮಯದಲ್ಲಿ ನೀಡಿದಂತಹ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಕಾಂಗ್ರೆಸ್ನಿಂದ ಕರ್ನಾಟಕದ ಮುಖ್ಯಮಂತ್ರಿ ಯಾರೇ ಆಗಲಿ, ಅಧಿಕಾರಕ್ಕೆ ಬಂದ ಮೊದಲ ದಿನವೇ ಇದು ಜಾರಿಯಾಗಲಿದೆ ಎಂದು ಭರವಸೆ ನೀಡಿದರು.