ಡೆನ್ಮಾರ್ಕ್ ಪ್ರಧಾನಿ ಮೆಟೆ ಫ್ರೆಡೆರಿಕ್ಸನ್ ಮೇಲೆ ಹಲ್ಲೆ ನಡೆದಿದ್ದು ಪ್ರಧಾನಿಗೆ ಯಾವುದೇ ಗಾಯವಾಗಿಲ್ಲ. ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಪನ್ಹ್ಯಾಗನ್ನ ಕಲ್ಟೋರ್ವೆಟ್ ಎಂಬಲ್ಲಿ ಶುಕ್ರವಾರ ಸಂಜೆ ಮೆಟೆ ಫ್ರೆಡೆರಿಕ್ಸನ್ ಮೇಲೆ ಹಲ್ಲೆ ನಡೆಸಲಾಗಿದ್ದು ಘಟನೆಯಿಂದ ಪ್ರಧಾನಿ ತೀವ್ರ ಆಘಾತಗೊಂಡಿದ್ದಾರೆ. ಆರೋಪಿಯನ್ನು ಬಂಧಿಸಿದ್ದು ವಿಚಾರಣೆಯ ಬಳಿಕ ಹೆಚ್ಚಿನ ಮಾಹಿತಿ ದೊರಕಬಹುದು ಎಂದು ಪ್ರಧಾನಿಯವರ ಕಚೇರಿ ಹೇಳಿಕೆ ನೀಡಿದೆ.
ಕೋಪನ್ಹ್ಯಾಗನ್ ವೃತ್ತದ ಬಳಿ ಪ್ರಧಾನಿ ನಿಂತಿದ್ದಾಗ ಅವರ ಎದುರುಗಡೆಯಿಂದ ಬಂದ ವ್ಯಕ್ತಿಯೊಬ್ಬ ಅವರ ಭುಜದ ಮೇಲೆ ಬಲವಾಗಿ ತಳ್ಳಿದಾಗ ಪ್ರಧಾನಿ ಕೆಳಗೆ ಬಿದ್ದರು. ಸುತ್ತಮುತ್ತ ಇದ್ದವರು ಅಲ್ಲಿಗೆ ಬರುತ್ತಿದ್ದಂತೆಯೇ ಆ ವ್ಯಕ್ತಿ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ. ಆದರೆ ಭದ್ರತಾ ಸಿಬಂದಿ ಆತನನ್ನು ಬಂಧಿಸಿ ಕರೆದೊಯ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಯುರೋಪಿಯನ್ ಪಾರ್ಲಿಮೆಂಟ್ ಅಧ್ಯಕ್ಷೆ ರೋಬರ್ಟಾ ಮೆಟ್ಸೋಲಾ, ಯುರೋಪಿಯನ್ ಯೂನಿಯನ್ ಮುಖ್ಯಸ್ಥ ಚಾಲ್ರ್ಸ್ ಮಿಚೆಲ್, ಯುರೋಪಿಯನ್ ಯೂನಿಯನ್ ಕಮಿಷನ್ ಮುಖ್ಯಸ್ಥೆ ಉರ್ಸುಲಾ ವಾನ್ಡರ್ ಹಲ್ಲೆ ಪ್ರಕರಣವನ್ನು ಖಂಡಿಸಿದ್ದಾರೆ.
ಯುರೋಪಿಯನ್ ಯೂನಿಯನ್ ಚುನಾವಣೆಯಲ್ಲಿ ಡೆನ್ಮಾರ್ಕ್ ಜನತೆ ಮತದಾನ ಮಾಡುವುದಕ್ಕೆ ಎರಡು ದಿನ ಮೊದಲು ಹಲ್ಲೆ ನಡೆದಿದೆ. ಮೂರು ವಾರಗಳ ಹಿಂದೆ ಸ್ಲೊವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಹತ್ಯೆಯ ಪ್ರಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ ರಾಬರ್ಟ್ ಫಿಕೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.