ಖಲಿಸ್ತಾನಿ ಉಗ್ರರು ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ನಲ್ಲಿ ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್ನ ಉಪ ಮುಖ್ಯಸ್ಥರನ್ನು ಕರೆಸಿ ತನ್ನ ಕಠಿಣ ನಿಲುವಿನ ಬಗ್ಗೆ ಎಚ್ಚರಿಕೆ ನೀಡಿದೆ.
ಖಲಿಸ್ತಾನ ಪರ ಪ್ರತ್ಯೇಕವಾದಿಗಳು ಪ್ರತಿಭಟನೆ ನಡೆಸಿದ್ದ ವೇಳೆ ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ನಲ್ಲಿ ಭಾರತ ಧ್ವಜವನ್ನು ಕೆಳಗಿಳಿಸಿದ ಘಟನೆಗೆ ಸಂಬಂಧಿಸಿದಂತೆ ಭಾರತ ಭಾನುವಾರ ರಾತ್ರಿ ದೆಹಲಿಯ ಹಿರಿಯ ಬ್ರಿಟಿಷ್ ರಾಜತಾಂತ್ರಿಕರನ್ನು ಕರೆಸಿಕೊಂಡು ಮಾತುಕತೆ ನಡೆಸಿದೆ.
ಲಂಡನ್ನಲ್ಲಿರುವ ಭಾರತೀಯ ರಾಜತಾಂತ್ರಿಕ ಸ್ಥಳಗಳು ಮತ್ತು ಸಿಬ್ಬಂದಿಯ ಭದ್ರತೆ ಬಗ್ಗೆ ಬ್ರಿಟನ್ ಸರ್ಕಾರದ ಉದಾಸೀನತೆ ಸ್ವೀಕಾರಾರ್ಹವಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಧ್ವಜವನ್ನು ಕೆಳಗಿಳಿಸಿರುವ ಘಟನೆ ಕುರಿತು ದೆಹಲಿಯಲ್ಲಿರುವ ಹೈಕಮಿಷನ್ನ ಅಧಿಕಾರಿಯನ್ನು ಎಂಇಎಗೆ ಕರೆಸಲಾಗಿದೆ. ಪ್ರತಿಭಟನಾಕಾರರಿಗೆ ಹೈಕಮಿಷನ್ ಆವರಣ ಪ್ರವೇಶಿಸಲು ಅವಕಾಶ ಮಾಡಿಕೊಟ್ಟ ಭದ್ರತಾ ಲೋಪದ ಕುರಿತು ವಿವರಣೆ ಕೇಳಲಾಗಿದೆ.