ತೆಲುಗು ಚಿತ್ರರಂಗದ ತಾರಾ ಕುಟುಂಬಗಳಲ್ಲಿ ಒಂದಾದ ಮೋಹನ್ ಬಾಬು ಕುಟುಂಬದ ತಂದೆ,ಮಗಳ ಜಗಳ ಬೀದಿಗೆ ಬಿದ್ದಿದೆ. ಮೋಹನ್ ಬಾಬು ಕಿರಿಯ ಪುತ್ರ ಮಂಚು ಮನೋಜ್ ಅವರನ್ನು ಮನೆಯಿಂದ ಹೊರ ಹಾಕಲಾಗಿದೆ. ಇದೀಗ ಮೋಹನ್ ಬಾಬು ಮನೆಗೆ ಮಂಚು ಮನೋಜ್ ಹೋಗಲು ಯತ್ನಿಸಿದಾಗ ಮೋಹನ್ ಬಾಬು, ಮಗನನ್ನು ತಡೆದಿದ್ದಲ್ಲದೆ ಆ ವೇಳೆ ವರದಿಗಾರನ ಮೇಲೂ ಹಲ್ಲೆ ಮಾಡಿದ್ದರು.
ವರದಿಗಾರನ ಮೇಲೆ ಮೋಹನ್ ಬಾಬು ಹಲ್ಲೆ ಖಂಡಿಸಿ ಮೋಹನ್ ಬಾಬು ಮನೆಯ ಎದುರು ಇಂದು ತೆಲುಗು ಮಾಧ್ಯಮ ವರದಿಗಾರರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾಧ್ಯಮಗಳ ಬಳಿ ಮಾತನಾಡಿದ ಮಂಚು ಮನೋಜ್, ‘ನನ್ನ ತಂದೆ ನನಗೆ ದೇವರಿದ್ದಂತೆ, ಅವರು ಮಾಧ್ಯಮಗಳ ಮೇಲೆ ಹಲ್ಲೆ ಮಾಡಿದ್ದಕ್ಕೆ ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ’ ಎಂದು ಕಣ್ಣೀರು ಹಾಕಿದ್ದಾರೆ.
‘ನಾನು ಕುಟುಂಬದಿಂದ ಯಾವುದೇ ಹಣ ಅಥವಾ ಆಸ್ತಿ ಕೇಳಿಲ್ಲ. ನಾನು ನನ್ನ ಆತ್ಮಗೌರವಕ್ಕಾಗಿ ಈ ಹೋರಾಟ ಮಾಡುತ್ತಿದ್ದೇನೆ. ನಾನು ಹಾಗೂ ನನ್ನ ಪತ್ನಿ ಕುಟುಂಬದಿಂದ ದೂರವೇ ಇದ್ದೆವು. ನನ್ನ ಸಹೋದರ ಮಂಚು ವಿಷ್ಣು ದುಬೈಗೆ ಶಿಫ್ಟ್ ಆದ. ಆಗ ನಮ್ಮ ಕುಟುಂಬದ ಆಪ್ತರು ಕೆಲವರು ಒತ್ತಾಯ ಮಾಡಿದ ಕಾರಣ ಕುಟುಂಬಕ್ಕೆ ಬೆಂಬಲವಾಗಿರಲೆಂದು ನಾನು ಮನೆಗೆ ಮರಳಿದೆ. ಆದರೆ ಈಗ ನನ್ನನ್ನು ಹೊರಗೆ ಹಾಕುವ ಪ್ರಯತ್ನ ನಡೆದಿದೆ. ವಿಜಯ್ ಎಂಬಾತ ಹಾಗೂ ಮಂಚು ವಿಷ್ಣು ಅವರ ಮಾತು ಕೇಳಿ ನನ್ನ ತಂದೆಯೇ ನನ್ನನ್ನು ದೂರ ಮಾಡುತ್ತಿದ್ದಾರೆ’ ಎಂದಿದ್ದಾರೆ ಮಂಚು ಮನೋಜ್.
‘ನನ್ನ ಮನೆಯಲ್ಲಿಯೇ ನನ್ನ ಮೇಲೆ ವಿನಯ್ ಹಾಗೂ ಕಿರಣ್ ಎಂಬುವರು ಹಲ್ಲೆ ಮಾಡಿದರು. ಶೂಟಿಂಗ್ ವೇಳೆ ನನ್ನ ಕಾಲಿಗೆ ಗಾಯ ಆಗಿತ್ತು. ಆ ಗಾಯ ಈಗ ಇನ್ನಷ್ಟು ಹೆಚ್ಚಾಗಿದೆ. ನನ್ನ ಪತ್ನಿ ಹಾಗೂ ಏಳು ತಿಂಗಳ ಮಗುವನ್ನು ಸಹ ಅವರು ನಿಂದಿಸಿದ್ದಾರೆ. ಈಗ ನಾನು ಈ ಹೋರಾಟವನ್ನು ನನ್ನ ಆತ್ಮಗೌರವಕ್ಕಾಗಿ ಮಾಡುತ್ತಿದ್ದೇನೆ’ ಎಂದು ಮಂಚು ಮನೋಜ್ ಹೇಳಿದ್ದಾರೆ.
ಮೋಹನ್ ಬಾಬು, ಪುತ್ರ ಮಂಚು ಮನೋಜ್ ಪತ್ನಿಯ ಮಾತು ಕೇಳಿ ಗಲಾಟೆ ಆರಂಭಿಸಿದ್ದಾನೆ. ನನ್ನ ಮೇಲೂ ಹಲ್ಲೆ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ. ನಿನ್ನೆ ರಾತ್ರಿ ನಡೆದ ಗಲಾಟೆಯ ಬಳಿಕ ಮೋಹನ್ ಬಾಬು ಆಸ್ಪತ್ರೆಗೆ ದಾಖಲಾಗಿದ್ದು, ಅವರ ತಲೆಗೆ ಪೆಟ್ಟಾಗಿದೆ ಎನ್ನಲಾಗುತ್ತಿದೆ.