ಯಾದಗಿರಿ: ಪೊಲೀಸರ ಮೇಲೆ ಪಿಸ್ತೂಲ್ ಹಾಗೂ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಡಕಾಯಿತಿ (Robbery) ಗ್ಯಾಂಗ್ ಲೀಡರ್ ಮೇಲೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿರುವ ಘಟನೆ ಯಾದಗಿರಿಯಲ್ಲಿ (Yadgiri) ನಡೆದಿದೆ.
ಆರೋಪಿ ಮಹಮ್ಮದ್ ರಫಿಯನ್ನು ಬಂಧಿಸಲು ಪೊಲೀಸರು ತೆರಳಿದ್ದಾಗ ಆತ ಪಿಸ್ತೂಲ್ ಹಾಗೂ ಚಾಕುವಿನಿಂದ ಹೆದರಿಸಿದ್ದಾನೆ. ಈ ವೇಳೆ ಸಿಪಿಐ ಸುನೀಲ್ ವಿ.ಮೂಲಿಮನಿ, ಪಿಸಿ ಅಬ್ದುಲ್ ಭಾಷ ಹಾಗೂ ಹರಿನಾಥರೆಡ್ಡಿಯವರು ಆರೋಪಿಯನ್ನು ಹಿಡಿಯಲು ಯತ್ನಿಸಿದ್ದಾರೆ. ಆಗ ಆರೋಪಿ ಮೂವರ ಮೇಲೂ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಸಿಪಿಐ ಸುನೀಲ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಫೆ. 24ರಂದು ಯಾದಗಿರಿ ನಗರದಲ್ಲಿ ಉದ್ಯಮಿ ದೀಪಕ್ ನಂದಕಿಶೋರ್ ಮನೆಯಲ್ಲಿ ಕಳ್ಳತನ ನಡೆದಿತ್ತು. ಎಂಟರಿಂದ ಹತ್ತು ಜನರ ತಂಡದಲ್ಲಿ ನಾಲ್ಕು ಜನ ದೀಪಕ್ ನಂದಕಿಶೋರ್ ಮನೆಯೊಳಗೆ ನುಗ್ಗಿ ಪಿಸ್ತೂಲ್ ತೋರಿಸಿ ಚಿನ್ನ, ಬೆಳ್ಳಿ, ಮೊಬೈಲ್ ಹಾಗೂ ಹಣವನ್ನು ದೋಚಿದ್ದರು.
ದೀಪಕ್ ಕುಟುಂಬಸ್ಥರು ವಿರೋಧಿಸಿದಾಗ ಕಾರದಪುಡಿ ಎರಚಿ ವಿಕೃತಿ ಮರೆದಿದ್ದರು. ಈ ವೇಳೆ ದೀಪಕ್ ಸಹೋದರ ಮನೆಯ ಮಹಡಿಯಿಂದ ಹಾರಿ ಕಿರುಚಾಡಿ ಜನರನ್ನ ಸೇರಿಸಿದ್ದರು. ಜನ ಬರುವಷ್ಟರಲ್ಲಿ ಕಳ್ಳರು ತಪ್ಪಿಸಿಕೊಂಡಿದ್ದರು. ನಗರದ ಪ್ರಮುಖ ಸರ್ಕಲ್ ಬಳಿ ಇರುವ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಸಂಪೂರ್ಣ ಮಾಹಿತಿ ಸಿಕ್ಕಿತ್ತು.
ಪ್ರಕರಣ ಸಂಬಂಧ ಯಾದಗಿರಿ ಎಸ್ಪಿ ಸಿಬಿ ವೇದಮೂರ್ತಿ, ಎಸ್ಪಿ ಸುನೀಲ್ ವಿ ಮೂಲಿಮನಿ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.
ಗಾಯಗೊಂಡಿದ್ದ ಆರೋಪಿಗೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆರೋಪಿಯ ಪ್ರತಿದಾಳಿಯಲ್ಲಿ ಗಾಯಗೊಂಡ ಪೊಲೀಸರಿಗೂ ಚಿಕಿತ್ಸೆ ನೀಡಲಾಗಿದೆ ಎಂದು ಎಸ್ಪಿ ವೇದಮೂರ್ತಿ ತಿಳಿಸಿದ್ದಾರೆ.