ಢಾಕಾ : ಬಾಂಗ್ಲಾದೇಶವು ಪರಸ್ಪರ ಹಿತಾಸಕ್ತಿಗಳ ಆಧಾರದ ಮೇಲೆ ಭಾರತದೊಂದಿಗೆ ಸಾಮಾನ್ಯ ಮತ್ತು ಸ್ನೇಹಪರ ಸಂಬಂಧವನ್ನು ಬಯಸುತ್ತದೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಲಹೆಗಾರ ಮುಹಮ್ಮದ್ ತೌಹೀದ್ ಹುಸೇನ್ ಹೇಳಿದ್ದಾರೆ.
ಢಾಕಾದಲ್ಲಿ ವಿದೇಶಿ ರಾಜತಾಂತ್ರಿಕರ ಜೊತೆ ನಡೆಸಿದ ಸಭೆಯಲ್ಲಿ ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು, ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಯ ವರದಿಯ ಬಗ್ಗೆ ಮುಹಮ್ಮದ್ ತೌಹೀದ್ ಹುಸೇನ್ ಮಾಹಿತಿ ನೀಡಿದರು.
ಅಲ್ಪಸಂಖ್ಯಾತರ ಮೇಲಿನ ದಾಳಿಯ ಘಟನೆ ನಡೆದಿಲ್ಲ ಎಂದು ನಾವು ಹೇಳುತ್ತಿಲ್ಲ. ಆದರೆ ಅವು ಪ್ರತ್ಯೇಕವಾಗಿರುತ್ತದೆ ಮತ್ತು ಹೆಚ್ಚು ಕಡಿಮೆ ಎಲ್ಲಾ ಆಡಳಿತಗಳಲ್ಲೂ ಸಂಭವಿಸುತ್ತದೆ’ ಎಂದು ಮುಹಮ್ಮದ್ ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯನ್ನು ನಿಯೋಜಿಸಬೇಕು ಮತ್ತು ಅಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಹುಸೇನ್ ` ನಾನು ಇದನ್ನು ಮಮತಾ ರೀತಿಯ ಹೇಳಿಕೆಯಾಗಿ ಪರಿಗಣಿಸುತ್ತೇನೆ. ಅವರು ಯಾಕೆ ಇಂತಹ ಹೇಳಿಕೆ ನೀಡಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ. ಎಂದಿನಂತೆಯೇ ಇದು ಅವರ ವೈಯಕ್ತಿಕ ಅಭಿಪ್ರಾಯವೆಂದು ಪರಿಗಣಿಸಬಹುದು’ ಎಂದು ತಿಳಿಸಿದರು.