ಬೆಂಗಳೂರು:- ಖಾಸಗಿ ದೇವಾಲಯ ಮುಜರಾಯಿ ಇಲಾಖೆಗೆ ಒಳಪಡಿಸುವ ಯತ್ನ ನಡೆಯುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮಾಹಿತಿ ಕೊರತೆಯಿದೆ. ನಮ್ಮ ಸರ್ಕಾರ ಬಂದ ಮೇಲೆ ಯಾವುದೇ ರೀತಿಯ ನೋಟಿಸ್ ಜಾರಿಮಾಡಿಲ್ಲ. ಖಾಸಗಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿಸುವ ವಿಷಯ ಪ್ರಸ್ತಾಪಿಸಿಲ್ಲ ಎಂದು ಟ್ವೀಟ್ ಮೂಲಕ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದರು.
ನಮ್ಮ ಸರ್ಕಾರ ಬಂದ ಮೇಲೆ ಯಾವುದೇ ರೀತಿಯ ನೋಟೀಸ್ ಆಗಲಿ ಯಾವುದೇ ಖಾಸಗಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರ್ಪಡಿಸುವ ವಿಷಯ ಬಂದಿರುವುದಿಲ್ಲ , ರಾಜಕೀಯವಾಗಿ ಆರೋಪ ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸ ರಾಜ್ಯಾಧ್ಯಕ್ಷರು ಮಾಡುತ್ತಿದ್ದಾರೆ ಎಂದರು.
ಹಿಂದಿನ ಅವರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚು ಖಾಸಗಿ ದೇವಾಲಯಗಳನ್ನು ಮುಜರಾಯಿ ಇಲಾಖೆಗೆ ಒಳಪಡಿಸಿರುತ್ತಾರೆ. ಬಿಜೆಪಿ ಬೆಂಬಲಿತ ಕೆಲ ಹಿಂದೂ ಸಂಘಟನೆಗಳು ಈ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.
ಇದನ್ನು ಬಳಸಿಕೊಂಡು ರಾಜಕೀಯ ಮಾಡಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹೊರಟಿರುವ ರಾಜ್ಯಾಧ್ಯಕ್ಷರ ಗಮನಕ್ಕೆ ಯಾವುದಾದರೂ ದಾಖಲೆ ಇದ್ದರೆ ನೀಡಿ. ನಿಮ್ಮ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಶೋಭೆ ತರುವ ರೀತಿ ನಿಮ್ಮ ಹೇಳಿಕೆಗಳು ಇರಬೇಕೆ ಹೊರತು, ಕೇವಲ ಸುಳ್ಳು ಆರೋಪ ಮಾಡಿ ಹಿಟ್ ಆಯಂಡ್ ರನ್, ರಾಜಕೀಯ ಲಾಭಕ್ಕಾಗಿ ಇರಬಾರದು ಎಂದರು.