ಲಂಡನ್: ಸದ್ಯ ಇಂಗ್ಲೆಂಡ್ (England) ವಿರುದ್ಧ ಟೆಸ್ಟ್ ಸರಣಿಯನ್ನಾಡುತ್ತಿರುವ ಆಸ್ಟ್ರೇಲಿಯಾ ತಂಡದ ಉಪನಾಯಕ ಸ್ಟೀವ್ ಸ್ಮಿತ್ (Steve Smith) ಟೆಸ್ಟ್ ಕ್ರಿಕೆಟ್ನಲ್ಲಿ 9 ಸಾವಿರ ರನ್ ಪೂರೈಸಿ, ವಿಶೇಷ ಸಾಧನೆ ಮಾಡಿದ್ದಾರೆ.
ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ (Test Cricket) ವೇಗವಾಗಿ 9 ಸಾವಿರ ರನ್ ಪೂರೈಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಜೊತೆಗೆ 176 ಇನ್ನಿಂಗ್ಸ್ಗಳಲ್ಲಿ 9 ಸಾವಿರ ರನ್ ಪೂರೈಸಿದ ರಾಹುಲ್ ದ್ರಾವಿಡ್ (Rahul Dravid) ಅವರ ದಾಖಲೆಯನ್ನ ಮುರಿದಿದ್ದಾರೆ.
ಇಂಗ್ಲೆಂಡ್ ವಿರುದ್ಧ ಆ್ಯಶಸ್ ಟೂರ್ನಿಯಲ್ಲಿ (Ashes Tourney) 2ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಸ್ಟೀವ್ ಸ್ಮಿತ್ 95 ರನ್ (162 ಎಸೆತ) ಗಳಿಸಿ ಕ್ರೀಸ್ನಲ್ಲಿದ್ದಾರೆ. ಬುಧವಾರ ಲಂಡನ್ನಿನ ಲಾರ್ಡ್ಸ್ ಮೈದಾನದಲ್ಲಿ ಆರಂಭವಾದ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆಸೀಸ್ ಪರ ಸ್ಮಿತ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ, 2ನೇ ದಿನದಲ್ಲಿ ಕ್ರೀಸ್ ಮುಂದುವರಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ 9 ಸಾವಿರ ರನ್ಗಳನ್ನು ದಾಖಲಿಸಿದ ಆಸ್ಟ್ರೇಲಿಯಾದ 4ನೇ ಬ್ಯಾಟ್ಸ್ಮ್ಯಾನ್ ಆಗಿ ಸ್ಟೀವ್ ಸ್ಮಿತ್ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ದಿಗ್ಗಜರಾದ ರಿಕಿ ಪಾಂಟಿಂಗ್ (13,378 ರನ್), ಆಲನ್ ಬಾರ್ಡರ್ (11,174 ರನ್) ಹಾಗೂ ಸ್ಟೀವ್ ವಾ (10,927 ರನ್) ಟೆಸ್ಟ್ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ 9 ಸಾವಿರ ರನ್ಗಳನ್ನು ಪೂರ್ಣಗೊಳಿಸಿದ 2ನೇ ಬ್ಯಾಟ್ಸ್ಮ್ಯಾನ್ ಎಂಬ ಸಾಧನೆಯನ್ನು ಸ್ಟೀವ್ ಸ್ಮಿತ್ ಮಾಡಿದ್ದಾರೆ.