ಬೆಂಗಳೂರು: ಪದವೀಧರ ಶಾಲಾ ಶಿಕ್ಷಕರ ನೇಮಕಾತಿ ಆದೇಶ ಪತ್ರ ನೀಡದ ವಿಚಾರವಾಗಿ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕರಾದ ಬಿವೈ ವಿಜಯೇಂದ್ರ, ಮಹೇಶ್ ತೆಂಗಿನಕಾಯಿ ಅವರು ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕಾನೂನಿನಲ್ಲಿ ಒಂದೇ ಒಂದು ತೊಡಕಿದೆ. ಪತಿಯ ಆದಾಯ ಯಾರದ್ದು ತೆಗೆದುಕೊಳ್ಳಬೇಕು ಎಂಬ ತೊಡಕಿದೆ. ಸದ್ಯ ಅದು ನ್ಯಾಯಾಲಯದಲ್ಲಿ ಇರುವುದರಿಂದ ಹೆಚ್ಚು ಮಾತನಾಡಲ್ಲ. ಯಾವುದಕ್ಕೂ ಆದೇಶ ಕೊಡಬೇಡಿ, ಪ್ರಕ್ರಿಯೆ ನಿಲ್ಲಿಸಬೇಡಿ ಅಂತಾ ನ್ಯಾಯಾಲಯ ಹೇಳಿದೆ. ಕೋರ್ಟ್ ಆದೇಶ ಮಾಡಿದರೆ ಕಣ್ಣುಮುಚ್ಚಿ ನೇಮಕಾತಿ ಪತ್ರ ನೀಡುತ್ತೇವೆ. ಜುಲೈ 17ರೊಳಗೆ ಕೋರ್ಟ್ ಆದೇಶ ಪಡೆದು ತೀರ್ಮಾನಿಸುತ್ತೇವೆ ಎಂದರು.
Author: Prajatv Kannada
ಬೆಂಗಳೂರು: ವಿಧಾನಸಭೆಯಲ್ಲಿ ಕೆ.ಜೆ.ಜಾರ್ಜ್, ಕುಮಾರಸ್ವಾಮಿ ನಡುವೆ ವಾಗ್ವಾದ ನಡೆದಿದೆ. ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂಬ ಆರೋಪಕ್ಕೆ ಕೆ.ಜೆ.ಜಾರ್ಜ್ ತಿರುಗೇಟು ಕೊಟ್ಟಿದ್ದಾರೆ. ನನ್ನ ಬಳಿ ಪೆನ್ಡ್ರೈವ್ ಇದೆ, ಅದರಲ್ಲಿ ಸಾಕ್ಷ್ಯವಿದೆ ಎಂದು ಹೇಳುತ್ತೀರಿ. ನಿಮ್ಮ ಬಳಿ ಯಾವ ಸಾಕ್ಷ್ಯವಿದೆ, ಅದನ್ನು ಸ್ಪೀಕರ್ಗೆ ನೀಡಿ ಎಂದು ವಿಧಾನಸಭೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿಗೆ ಕೆ.ಜೆ.ಜಾರ್ಜ್ ಮನವಿ ಮಾಡಿದರು. ಅದಕ್ಕೆ ಪೆನ್ಡ್ರೈವ್ನಲ್ಲಿರುವ ಸಾಕ್ಷ್ಯ ವೀಕ್ಷಣೆಗೆ ಸದನದಲ್ಲಿ ವ್ಯವಸ್ಥೆ ಮಾಡಿ. ಸ್ಪೀಕರ್ ಒಪ್ಪಿಗೆ ಕೊಟ್ಟರೆ ಸದನದಲ್ಲೇ ಪೆನ್ ಡ್ರೈವ್ ಪ್ರದರ್ಶನ ಮಾಡುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರು: ಸಂಭ್ರಮ ಶನಿವಾರ ಹೆಸರಿನಲ್ಲಿ ಶಾಲಾ ಮಕ್ಕಳಿಗೆ `ಬ್ಯಾಗ್ ರಹಿತ’ ದಿನದ ಆಚರಣೆ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ. ಮಕ್ಕಳಿಗೆ ಪಠ್ಯವನ್ನು ಹೊರೆಯಾಗಿಸದೇ ಉಲ್ಲಾಸದಿಂದ ಕಲಿಯುವಂತೆ ಮಾಡುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ಶನಿವಾರದಂದು ಬ್ಯಾಗ್ ರಹಿತ ದಿನವೆಂದು ಆಚರಿಸುವಂತೆ ಆದೇಶಿಸಲಾಗಿದೆ. 2023-24 ನೇ ಸಾಲಿನಲ್ಲಿ ಪ್ರತಿ ತಿಂಗಳು 3 ನೇ ಶನಿವಾರ ಶಾಲಾ ಹಂತದಲ್ಲಿ ಸದರಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ತಿಳಿಸಲಾಗಿದ್ದು, ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆಯನ್ನು ಬೆಳೆಸಲು ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿಗಳಿಗಾಗಿ 10 ಸ್ವಯಂ ವಿವರಣಾತ್ಮಕ ಮಾಡ್ಯೂಲ್ ಗಳನ್ನು ಹಾಗೂ ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿಗಳನ್ನು ಸಿದ್ದಪಡಿಸಲಾಗಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಸಂಭ್ರಮ ಶನಿವಾರ ಹೆಸರಿನಲ್ಲಿ ಶಾಲಾ ಮಕ್ಕಳಿಗೆ `ಬ್ಯಾಗ್ ರಹಿತ’ ದಿನದ ಆಚರಣೆ ಬಗ್ಗೆ ಮಹತ್ವದ ಸುತ್ತೋಲೆ ಹೊರಡಿಸಿದೆ.
ಬೆಂಗಳೂರು: ಕೆಎಸ್ಆರ್ಟಿಸಿ ಬಸ್ ಚಾಲಕ ಆತ್ಮಹತ್ಯೆ ಯತ್ನ ವಿಷಯಕ್ಕೆ ಸಂಬಂಧಿಸಿ ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ವಿಷಯ ಪ್ರಸ್ತಾಪಿಸಿದರು. ಮಂಡ್ಯ ಜಿಲ್ಲೆ ನಾಗಮಂಗಲ ಡಿಪೋ ಎದುರು ಚಾಲಕ ವರ್ಗಾವಣೆಯಿಂದ ಬೇಸತ್ತು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು, ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಆತ್ಮಹತ್ಯೆಗೆ ಯತ್ನಿಸುವ ಮುನ್ನ ಬರೆದ ಪತ್ರದಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕ ಸಚಿವರ ಹೆಸರು ಉಲ್ಲೇಖಿಸಿದ್ದಾರೆ. ಎಫ್ಐಆರ್ನಲ್ಲಿ ಸಚಿವರ ಹೆಸರು ಉಲ್ಲೇಖಿಸಬೇಕು. ಸಚಿವ ಎನ್.ಚಲುವರಾಯಸ್ವಾಮಿ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯ ಮಾಡಿದರು.
ಬೆಂಗಳೂರು: ಸ್ಪೀಕರ್ ಖಾದರ್ ಕನ್ನಡದ ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆದಿದೆ. ಸ್ಪೀಕರ್ ಕನ್ನಡ ಬಗ್ಗೆ ಚರ್ಚೆ ಹಿನ್ನೆಲೆ ಯು.ಟಿ.ಖಾದರ್ ಮಾತನಾಡುತ್ತ, ಯತ್ನಾಳ್ ಪದೇ ಪದೆ ನನ್ನ ಕನ್ನಡ ಭಾಷೆ ಸರಿಪಡಿಸುತ್ತಾರೆ. ನನ್ನ ಕನ್ನಡ ಹೆಚ್ಚು ಕಡಿಮೆ ಇದೆ, ಆದ್ರೆ ನಮ್ಮ ಪ್ರೀತಿಯ ಭಾಷೆ. ಕನ್ನಡ ಪ್ರೀತಿ, ಸೋದರತೆ, ಸಾಮರಸ್ಯದ ಭಾಷೆ. ಅದಕ್ಕೆ ನಾನು ಕೃತಜ್ಞತೆ ಹೇಳುತ್ತಿದ್ದೇನೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ BJP ಶಾಸಕ ಬಸನಗೌಡ ಯತ್ನಾಳ್, ಸಮಸ್ಯೆ ಏನೆಂದರೆ ನಮ್ಮ ಕನ್ನಡ ಬೇರೆ, ಹೈದರಾಬಾದ್ ಕನ್ನಡ ಬೇರೆ. ಮೈಸೂರು ಕನ್ನಡ ಬೇರೆ, ಮಂಗಳೂರು ಕನ್ನಡ ಬೇರೆ, ಮುಂಬೈ ಕನ್ನಡ ಬೇರೆ, ನಮಗೆ ನಿಮ್ಮ ಭಾಷೆ ಅರ್ಥ ಆಗಬೇಕು, ಅದಕ್ಕೆ ಆ್ಯಪ್ ಹಾಕಿಕೊಡಿ. ಮೊಬೈಲ್ನಲ್ಲಿ ಯುಎಸ್ ಇಂಗ್ಲಿಷ್, ಇಂಗ್ಲೆಂಡ್ ಇಂಗ್ಲಿಷ್ ಇದ್ದ ಹಾಗೆ. ಲೋಕಸಭೆಯಲ್ಲಿ ಹಿಂದಿ ಟು ಕನ್ನಡ, ಕನ್ನಡ ಟು ಹಿಂದಿ ಇದ್ದ ಹಾಗೆ ಸ್ಪೀಕರ್ ಟು ಕನ್ನಡ ಆ್ಯಪ್ ಮಾಡಿ ಎಂದು ಕಾಲೆಳೆದರು.
ಬೆಂಗಳೂರು: ನಾಗಮಂಗಲ KSRTC ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ನಿಯಮ 60ರ ಅಡಿ ಚರ್ಚೆಗೆ ಅವಕಾಶ ಕೊಡುವಂತೆ ಸ್ಪೀಕರ್ಗೆ ಮಾಜಿ ಸಿಎಂ H.D.ಕುಮಾರಸ್ವಾಮಿ ಮನವಿ ಪತ್ರ ನೀಡಿದ್ದಾರೆ. ಚರ್ಚೆಗೆ ಸಮಯ ಕೊಡುವಂತೆ JDS ಸದಸ್ಯರು ಪಟ್ಟು ಹಿಡಿಯಲಿದ್ದು ಪ್ರಕರಣದ ಹಿಂದೆ ಚಲುವರಾಯಸ್ವಾಮಿ ಇದ್ದಾರೆ. ಅವರ ರಾಜೀನಾಮೆಗೆ JDS ಶಾಸಕರು ಒತ್ತಾಯಿಸಲಿದ್ದಾರೆ. ಆತ್ಮಹತ್ಯೆ ಯತ್ನಿಸಿದ KSRTC ನೌಕರ ವೆಂಟಿಲೇಟರ್‌ನಲ್ಲಿದ್ದಾರೆ. ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಇನ್ನೂ 48 ಗಂಟೆ ಐಸಿಯುನಲ್ಲೇ ಇಡಬೇಕಾಗುತ್ತದೆ ಅಂತಾ ವೈದ್ಯರು ಹೇಳಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬಂದು 50 ದಿನ ಆಗಿಲ್ಲ. ಆಗಲೇ ಇಷ್ಟು ದ್ವೇಷದ ರಾಜಕಾರಣ ಶುರುವಾಗಿದೆ. ದುಡ್ಡು ತೆಗೆದುಕೊಂಡು ವರ್ಗಾವಣೆ ಮಾಡ್ತಿದ್ದಾರೆ. ಚುನಾವಣೆಗೆ ಖರ್ಚು ಮಾಡಿದ ಹಣ ಮತ್ತೆ ವಾಪಸ್ ಪಡೆಯೋದಕ್ಕೆ ವರ್ಗಾವಣೆ ದಂಧೆ ಶುರುಮಾಡಿದ್ದಾರೆ. ಆದ್ರೆ ಜೀವಗಳ ಜೊತೆ ಚೆಲ್ಲಾಟ ಆಡುವ ಇಂತಹ ಚಿಲ್ಲರೆ ರಾಜಕಾರಣ ಮಾಡೋದು ಸರಿಯಲ್ಲ. ಇದನ್ನ ಸುಮ್ಮನೆ ಬಿಡಲ್ಲ ಎಂದು ಗುಡುಗಿದರು.
ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಧಮ್, ತಾಕತ್ತು ಇದ್ರೆ ಪೆನ್ ಡ್ರೈವ್ನಲ್ಲಿ ಏನಿದೆ ಎಂದು ಬಹಿರಂಗ ಪಡಿಸಿ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಗೆ ಮಾಜಿ ಸಿಎಂ ಡಾ.ಎಂ.ವೀರಪ್ಪ ಮೊಯಿಲಿ ಸವಾಲು ಹಾಕಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋತು ಹೆಚ್ಡಿಕೆ ಹತಾಶರಾಗಿದ್ದಾರೆ. ಅವರು ಸಿಎಂ ಆಗಿದ್ದಾಗಿನ ದಾಖಲೆ ಪೆನ್ ಡ್ರೈವ್ನಲ್ಲಿ ಇರಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ತಪ್ಪು ಮಾಡಲ್ಲ. ತಪ್ಪಿನಲ್ಲಿ ಸಿಲುಕಿಸಲು ಬಿಜೆಪಿ ಜೆಡಿಎಸ್ ಯತ್ನಿಸುತ್ತಿದೆ. ಅವರ ಕನಸ್ಸು ಹಿಡೇರಲ್ಲ ಎಂದರು. ಬುಧವಾರ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಪೆನ್ ಡ್ರೈವ್ ಬಾಂಬ್ ಹಾಕಿದ್ದಾರೆ. ವರ್ಗಾವಣೆ ದಂಧೆ ಬಗ್ಗೆ ಸದನದಲ್ಲಿ ಗುಡುಗುತ್ತಿದ್ದ ಕುಮಾರಸ್ವಾಮಿ, ಸಾಕ್ಷ್ಯ ಸಮೇತ ವಿಧಾನಸೌಧಕ್ಕೆ ಎಂಟ್ರಿ ಕೊಟ್ರು ಸಚಿವರೊಬ್ಬರು ವರ್ಗಾವಣೆಗೆ ಹಣ ಡಿಮ್ಯಾಂಡ್ ಮಾಡಿರೋ ಆಡಿಯೋ ಅದಾಗಿದ್ದು ಎಂದು ತನ್ನ ಜೇಬಿನಿಂದ ಪೆನ್ ಡ್ರೈವ್ ತೆಗೆದು ಮಾಧ್ಯಮಗಳ ಎದುರು ತೋರಿಸಿದ್ದಾರೆ.
ಮೈಸೂರು ;- ವರ್ಗಾವಣೆ ದಂಧೆ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಸಂಬಂಧ ಮೈಸೂರಿನಲ್ಲಿ ಮಾತನಾಡಿದ ಅವರು, ಪೆನ್ ಡ್ರೈವ್ ಹೊರಗೆ ಬಂದರೆ ಮಂತ್ರಿ ರಾಜೀನಾಮೆ ನೀಡಬೇಕಾಗುತ್ತದೆ. ಸೂಕ್ತ ಸಮಯದಲ್ಲಿ ಪೆನ್ ಡ್ರೈವ್ ನಲ್ಲಿರುವ ದಾಖಲೆ ಬಿಡುಗಡೆ ಮಾಡ್ತೀನಿ ಎಂದರು. ಈ ಸರ್ಕಾರ ಏನು ಮಾತನಾಡುತ್ತದೆಯೋ ಎಲ್ಲವನ್ನು ಮಾತನಾಡಲಿ. ನನ್ನನ್ನು ಹಿಟ್ ಅಂಡ್ ರನ್ ಎಂದು ಹೇಳಿಕೊಳ್ಳಲಿ. ಕಾಂಗ್ರೆಸ್ ಹೀಗೆ ಮಾತನಾಡುತ್ತಿರಲಿ ಎಂದು ಹೇಳಿದ್ದಾರೆ. ಸಮಯ ಬಂದಾಗ ಪೆನ್ ಡ್ರೈವ್ ಬಿಡುಗಡೆ ಮಾಡುತ್ತೇನೆ. ಪೆನ್ ಡ್ರೈವ್ ಮಾಹಿತಿ ಹೊರಗೆ ಬಂದರೆ ಮಂತ್ರಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ವರ್ಗಾವಣೆ ದಂಧೆ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಚಿತ್ರದುರ್ಗ: ಸವರ್ಣಿಯರಿಂದ ಪರಿಶಿಷ್ಟ ಜಾತಿ ವ್ಯಕ್ತಿಯ ಮೇಲೆ ದೌರ್ಜನ್ಯ ನಡೆದಿದ್ದು ದೌರ್ಜನ್ಯದ ನಂತರ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಾಳ್ಯ ಗ್ರಾಮದಲ್ಲಿ ಜರುಗಿದೆ. ಗ್ರಾಮದ ಸುರೇಶ್ ಹಾಗೂ ಸಹಚರರು ದಲಿತರ ಮನೆಗೆ ನುಗ್ಗಿ ಮನೆ ಮೇಲಿನ ಹಂಚು ಹೊಡೆದು ಪ.ಜಾತಿ ವ್ಯಕ್ತಿಯ ಮೇಲೆ ಮನ ಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿ ತಾಳ್ಯ ಗ್ರಾಮದ ಮಾರುತಿ (28) ಎನ್ನಲಾಗಿದ್ದು ಹಲ್ಲೆ ಬಳಿಕ ಮನೆಯಲ್ಲಿ ರಾತ್ರಿ ನಿಗೂಢವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ ಆಗಿದೆ. ರಾತ್ರಿ ವೇಳೆ ದೌರ್ಜನ್ಯ ಮಾಡಿದ ವ್ಯಕ್ತಿಗಳ ವಿರುದ್ದ ಕೊಲೆ ಕೇಸ್ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಹೊಳಲ್ಕೆರೆ ಸಿಪಿಐ ರವೀಶ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಡಿಕೇರಿ: ಬೃಹತ್ ಗಾತ್ರದ ಮರ ಬೈಕ್ ಮೇಲೆ ಬಿದ್ದಿರುವ ಘಟನೆ ಮಡಿಕೇರಿ ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಐಗೂರಿನ ವಿಜಯನಗರದಲ್ಲಿ ನಡೆದಿದೆ. ಬೈಕ್ ಸವಾರ ಅಪಾಯದಿಂದ ಪಾರಾಗಿದ್ದು, ಟಾಟಾ ಸಂಸ್ಥೆಯ ತೋಟದಿಂದ ಮರ ಬಿದ್ದಿದೆ. ಇನ್ನೂ ಕರ್ನಾಟಕದಲ್ಲಿ ಮುಂಗಾರು (Karnataka Monsson) ಮಳೆ ಚುರುಕಾಗಿದೆ. ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ಶಾಲೆಗಳಿಗೆ ರಜೆ ನೀಡಲಾಗಿದೆ. ಅನೇಕ ಕಡೆ ವರುಣ ಅಬ್ಬರಿಸಿ ಬೊಬ್ಬೆರೆದಿದ್ದಾನೆ.