ಬೆಂಗಳೂರು: ರಸ್ತೆ ಗುಂಡಿ ವಿಚಾರವಾಗಿ ಪ್ರತ್ಯೇಕ ಯೋಜನೆ ರೂಪಿಸುತ್ತೇವೆ. ತ್ಯಾಜ್ಯ ವಿಲೇವಾರಿ ಕುರಿತು ಅಧಿಕಾರಿಗಳ ಸಭೆ ಮಾಡಿದ್ದೇನೆ. ಈ ಬಗ್ಗೆ ಉತ್ತಮ ನಿರ್ವಹಣೆ ಮಾಡುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಲು ತೀರ್ಮಾನಿಸಿದ್ದೇವೆ. ಚೆನ್ನೈ, ಇಂದೋರ್ ಸೇರಿದಂತೆ ಅನೇಕ ಕಡೆಗಳಲ್ಲಿ ಉತ್ತಮ ತ್ಯಾಜ್ಯ ನಿರ್ವಹಣೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾವು ಈ ವಿಚಾರದಲ್ಲಿ ದೀರ್ಘಾವಧಿಯ ಯೋಜನೆ ರೂಪಿಸಿಕೊಳ್ಳಬೇಕು. ಕಾನೂನು ಮಿತಿ, ಭೂಪ್ರದೇಶದ ಮಿತಿಯಲ್ಲಿ ನಾವು ಯೋಜನೆ ರೂಪಿಸಬೇಕು. ಕೇವಲ ಕಸ ತೆಗೆದುಕೊಂಡು ಹೋಗಿ ಸುರಿದರೆ ಆಗುವುದಿಲ್ಲ. ತ್ಯಾಜ್ಯದ ಬೆಟ್ಟ ನಿರ್ಮಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ.ಇದು ಒಂದು ದಿನ ಅಥವಾ ವರ್ಷದಲ್ಲಿ ಬದಲಾವಣೆ ತರಲು ಆಗುವುದಿಲ್ಲ. ಆದರೂ ಕಾಲಮಿತಿ ನಿಗದಿ ಮಾಡಿಕೊಂಡು ಕೆಲಸ ಮಾಡಬೇಕಿದೆ. ಬೆಂಗಳೂರಿನ ಜನಸಂಖ್ಯೆ 1.30 ಕೋಟಿ ಇದೆ. 50 ಲಕ್ಷದಷ್ಟು ಮಂದಿ ಬೆಂಗಳೂರಿಗೆ ಬಂದು ಹೋಗುತ್ತಿದ್ದಾರೆ.ರಾಜ್ಯ ಹಾಗೂ ದೇಶಕ್ಕೆ ಬೆಂಗಳೂರಿನಿಂದ ಹೆಚ್ಚಿನ ಪ್ರಮಾಣದ ಹಣ ತೆರಿಗೆ ರೂಪದಲ್ಲಿ ಹೋಗುತ್ತಿದೆ. ಬೆಂಗಳೂರಿಗೆ ಉದ್ಯೋಗ, ಶಿಕ್ಷಣಕ್ಕಾಗಿ ಬಂದವರು ಮತ್ತೆ ತಮ್ಮ ಊರಿಗೆ ಹೋಗುತ್ತಿಲ್ಲ.…
Author: Prajatv Kannada
ಪ್ಯಾನ್ ಇಂಡಿಯಾ ಸ್ಟಾರ್ ನಟ ಯಶ್ ಇಂದು ಪತ್ನಿ ರಾಧಿಕಾ ಪಂಡಿತ್ , ಮಕ್ಕಳಾದ ಆರ್ಯಾ, ಅಥರ್ವ ಅತ್ತೆ ಮಾವನ ಜೊತೆ ನಂಜನಗೂಡಿಗೆ ಆಗಮಿಸಿ, ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಆಗಮಿಸಿದ್ದ ನಟ ಯಶ್ ಕೆಲ ಹೊತ್ತು ದೇವಸ್ಥಾನದಲ್ಲೇ ಇದ್ದು ನಂಜುಂಡೇಶ್ವರನ ದರ್ಶನ ಪಡೆದಿದ್ದಾರೆ. ಕಳೆದ ಮೂರು ದಿನಗಳಿಂದ ಯಶ್ ಮೈಸೂರು ಭಾಗದಲ್ಲಿ ಪ್ರವಾಸದಲ್ಲಿದ್ದರು. ನಾಗರ ಹೊಳೆ, ಬಂಡೀಪುರ ಅರಣ್ಯದಲ್ಲಿ ಸಫಾರಿ ಮಾಡಿರುವ ನಟ ಯಶ್ ಇದೀಗ ಶ್ರೀಕಂಠೇಶ್ವರ ದೇವರಿಗೆ ಪೂಜೆ ನೆರವೇರಿಸಿದ್ದಾರೆ.
ಬೆಂಗಳೂರು: ಕನ್ನಡದ ಕೆಲವು ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಘಳಿಸಿರುವ ನಟ ಪ್ರಜ್ವಲ್ ಬಾರ್ನಲ್ಲಿ ಉಂಟಾದ ಕಿರಿಕ್ ನಿಂದಾಗಿ ಹೆಸರು ಕೆಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಟನ ವಿರುದ್ಧ ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಆಗಿದೆ. ‘ಅಮೃತವರ್ಷಿಣಿ’ ಹಾಗೂ ‘ಅಣ್ಣ ತಂಗಿ’ ಧಾರಾವಾಹಿ ಮೂಲಕ ಪ್ರಜ್ವಲ್ ಖ್ಯಾತಿ ಘಳಿಸಿದ್ದು, ಮೂರು ದಿನದ ಹಿಂದೆ ನಡೆದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಚೇತನ್ ಎಂಬುವರ ಜೊತೆ ಪ್ರಜ್ವಲ್ ಆರ್ಆರ್ ನಗರದ ‘ಅಮೃತ ಬಾರ್ ಆ್ಯಂಡ್ ರೆಸ್ಟೋರೆಂಟ್’ನಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ. ಪ್ರಜ್ವಲ್ ತಮ್ಮ ಸ್ನೇಹಿತರ ಜೊತೆ ಅಮೃತ ಬಾರ್ಗೆ ಹೋಗಿದ್ದರು. ಇದೇ ಬಾರ್ಗೆ ಚೇತನ್ ಕೂಡ ತನ್ನ ಸ್ನೇಹಿತರ ಜೊತೆ ಬಂದಿದ್ದರು. ಈ ವೇಳೆ ಪ್ರಜ್ವಲ್ನ ಸ್ನೇಹಿತ ಮನು ಎಂಬುವವರನ್ನು ಚೇತನ್ ಕರೆದಿದ್ದಾರೆ. ಇದರಿಂದ ಅಲ್ಲಿಯೇ ಇದ್ದ ಪ್ರಜ್ವಲ್ ಅವರು ಚೇತನ್ ಮೇಲೆ ಹಲ್ಲೆ ಮಾಡಿದ್ದಾರೆ. ಮರದ ಪೀಸ್ನಿಂದ ಚೇತನ್ ಹಾಗೂ ಸ್ನೇಹಿತರ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದ ಆರೋಪವನ್ನು ಚೇತನ್ ನಟ…
ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆ ಹಣ್ಣು ವಿತರಿಸಲು ಕರ್ನಾಟಕ ಸರ್ಕಾರ ಆದೇಶಿಸಿದೆ. 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ಮಾಡುವಂತೆ ಇಂದು(ಜೂನ್ 21) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶುಭ ಕಲ್ಯಾಣ್ ನಿರ್ದೇಶಕರು ಪಿ. ಎಂ. ಪೋಷಣ್, ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಈ ಕುರಿತು ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1-8ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಬೇಯಿಸಿದ ಮೊಟ್ಟೆ (ಮೊಟ್ಟೆ ಸ್ವೀಕರಿಸದ ಮಕ್ಕಳಿಗೆ ಬಾಳೆ ಹಣ್ಣು ಅಥವಾ ಶೇಂಗಾ ಚಿಕ್ಕಿ) ವಿತರಿಸುವಂತೆ ಸೂಚಿಸಿದ್ದಾರೆ. 23 ಜಿಲ್ಲೆಗಳಲ್ಲಿ 1ರಿಂದ 8ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಫಲಾನುಭವಿ ಮಕ್ಕಳಿಗೆ ಶಾಲೆಯ ಮುಖ್ಯ ಶಿಕ್ಷಕರು ಹಿಂದಿನ ಸಾಲಿನ ಮಾರ್ಗಸೂಚಿಯಂತೆ ಎಸ್ಡಿಎಂಸಿ ನೇತೃತ್ವದಲ್ಲಿ ಅಗತ್ಯ ಕ್ರಮಕೈಗೊಂಡು ಪೂರಕ ಪೌಷ್ಠಿಕ ಆಹಾರವನ್ನು ವಿತರಿಸುವಂತೆ ತಿಳಿಸಿದೆ.
ಬೆಂಗಳೂರು: ನಟ ಶಿವರಾಜ್ ಕುಮಾರ್ ಇಂದು ತಮ್ಮ ಪತ್ನಿ ಗೀತಾ ಹಾಗೂ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸದಾಶಿವನಗರದಲ್ಲಿರುವ ಮನೆಯಲ್ಲಿ ಭೇಟಿಯಾದರು. ಗೀತಾರನ್ನು ಮುಂದಿನ ವರ್ಷ ನಡೆಯಲಿರುವ ಲೋಕ ಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಅಭ್ಯರ್ಥಿಯಾಗಿಸುವ ಪ್ರಸ್ತಾಪವಿದೆ ಮತ್ತು ಗೀತಾ ಸಹ ಆ ಬಗ್ಗೆ ಆಸಕ್ತಿ ತೋರಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ. ಸಾರ್ವತ್ರಿಕ ಚುನಾವಣೆ ಬಹಳ ದೂರವೇನೂ ಇಲ್ಲ, ಕೇವಲ 10 ತಿಂಗಳು ದೂರದಲ್ಲಿದೆ. ಕಾಂಗ್ರೆಸ್ ಪಕ್ಷ ಈಗಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆಂದು ಮಾಹಿತಿ ತಿಳಿದುಬರುತ್ತಿದೆ. ಆದರೂ ಏನೆಂಬುದು ಕಾದುನೋಡಬೇಕಿದೆ ಅಷ್ಟೇ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆತಿಥೇಯರ ಎದುರು ಬರೋಬ್ಬರಿ 5 ಪಂದ್ಯಗಳ ಸರಣಿಯಲ್ಲಿ ಕಾದಾಟ ನಡೆಸಲಿದೆ. ಭಾರತ ತಂಡ ಇದೇ ವರ್ಷ ಫೆಬ್ರವರಿ 1ರಂದು ತನ್ನ ಕಟ್ಟ ಕಡೆಯ ಟಿ20-ಐ ಪಂದ್ಯವನ್ನು ಆಡಿದ್ದು, ಇದೀಗ ಕೆರಿಬಿಯನ್ನರ ಎದುರು ಪೈಪೋಟಿ ನಡೆಸಲು ಸಜ್ಜಾಗಿದೆ. ಟೀಮ್ ಇಂಡಿಯಾ ಸದ್ಯ ವಿಶ್ರಾಂತಿಯಲ್ಲಿದ್ದು, ಜುಲೈನಲ್ಲಿ ಕೆರಿಬಿಯನ್ನರ ನಾಡಿಗೆ ಪ್ರಯಾಣ ಬಳೆಸಲಿದೆ. ಮೊದಲಿಗೆ 2 ಪಂದ್ಯಗಳ ಟೆಸ್ಟ್ ಸರಣಿ ಮತ್ತು 3 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಗಳು ನಡೆಯಲಿವೆ. ಈ ಎರಡೂ ಸರಣಿಗಳಿಗೆ ಅನುಭವಿ ಓಪನರ್ ರೋಹಿತ್ ಶರ್ಮಾ ನಾಯಕನಾಗಿ ಮುಂದುವರಿಯುವ ಸಾಧ್ಯತೆ ಹೆಚ್ಚಿದ್ದು, ಬಳಿಕ ನಡೆಯಲಿರುವ 5 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲಿ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸಾರಥ್ಯ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಟಿ20 ಸರಣಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಅನುಭವಿಗಳನ್ನು ಹೊರಗಿಟ್ಟು ಯುವ ಆಟಗಾರರ ತಂಡವನ್ನು ಬಿಸಿಸಿಐ ಪ್ರಕಟ ಮಾಡಲಿದೆ ಎಂದು ಹೇಳಿವೆ. ಕ್ರಿಕ್ ಬಝ್ ಮಾಡಿರುವ ವರದಿ ಪ್ರಕಾರ ಭಾರತದ…
ಲೂಸಿಯಾ ಖ್ಯಾತಿಯ ಪವನ್ ಕುಮಾರ್ ನಿರ್ದೇಶನದ, ಮಲಯಾಳಂನ ಸ್ಟಾರ್ ನಟ ಫಾಹರ್ ಫಸಿಲ್ ನಟನೆಯ ಧೂಮಂ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರ್ತಿದೆ. ನಿರ್ದೇಶಕ, ನಿರ್ಮಾಪಕರಿಬ್ಬರೂ ಕನ್ನಡದವರೇ ಆಗಿದ್ದರೂ ಸಹ ಧೂಮಂ ಮಲಯಾಳಂ ಸಿನಿಮಾ ಆಗಿದ್ದು ಕನ್ನಡದಲ್ಲಿ ಡಬ್ ಆಗಿ ಬಿಡುಗಡೆ ಆಗಲಿದೆ. ಧೂಮಂ ಸಿನಿಮಾ ಪ್ರಾರಂಭವಾಗಿದ್ದು ದ್ವಿತ್ವ ಸಿನಿಮಾ ನಿಂತು ಹೋಗಿದ್ದಕ್ಕೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ದ್ವಿತ್ವ ಸಿನಿಮಾ ಮಾಡಲು ಪವನ್ ಕುಮಾರ್ ಮುಂದಾಗಿದ್ದರು. ಆ ಸಿನಿಮಾವನ್ನು ಕನ್ನಡ ಹಾಗೂ ಮಲಯಾಳಂ ಎರಡೂ ಭಾಷೆಗಳಲ್ಲಿ ಒಟ್ಟಿಗೆ ನಿರ್ಮಿಸಲು ಹೊಂಬಾಳೆ ನಿರ್ಮಾಣ ಸಂಸ್ಥೆ ರೆಡಿಯಾಗಿತ್ತು. ಅದಕ್ಕಾಗಿ ಅಪ್ಪುವಿನ ಫೋಟೋ ಶೂಟ್ ಕೂಡ ನಡೆದಿತ್ತು. ಆದ್ರೆ ಆ ಮಧ್ಯೆಯೇ ನಟ ಪುನೀತ್ ರಾಜ್ ಕುಮಾರ್ ನಿಧನರಾದರು. ಬಳಿಕ ದ್ವಿತ್ವ ಸಿನಿಮಾ ನಿಂತು ಹೋಯಿತು. ಅಂದ ಹಾಗೆ ದ್ವಿತ್ವ ಮಾತ್ರವಲ್ಲ ಧೂಮಂ ಚಿತ್ರಕ್ಕೂ ಅಪ್ಪು ಅವರೇ ನಾಯಕರಾಗಬೇಕಿತ್ತಂತೆ.
ಉತ್ತರಾಖಂಡ್: ಇಂದು ದೇಶಾದ್ಯಂತ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದ್ದು ಉತ್ತರಾಖಂಡ್ನ ಹರಿದ್ವಾರದಲ್ಲಿ ಯೋಗ ಗುರು ಬಾಬಾ ರಾಮ್ದೇವ್ ನೇತೃತ್ವದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ ನಡೆಯುತ್ತಿದೆ. ಆದ್ರೆ ಯೋಗಗುರು ಬಾಬಾ ರಾಮ್ದೇವ್ ಅವರು ಒಂದು ದಿನ ಮೊದಲೇ ಯೋಗಾಸನದ ಅಭ್ಯಾಸ ಮಾಡಿದ್ದಾರೆ. ನಿನ್ನೆ ಸಿಂಗಾಪುರದಲ್ಲಿ ಯೋಗಾಭ್ಯಾಸ ಮಾಡಿದ ಪತಂಜಲಿ ಸಂಸ್ಥಾಪಕ ಮತ್ತು ಯೋಗಗುರು ಬಾಬಾ ರಾಮ್ದೇವ್, ಯೋಗದ ವಿವಿಧ ಆಸನಗಳನ್ನ ಪ್ರದರ್ಶಿಸಿದ್ರು. ಜೂನ್ 21ರ ಯೋಗ ದಿನದಂದು ಯೋಗಗುರು ಬಾಬಾ ರಾಮ್ದೇವ್, ಉತ್ತರಾಖಂಡ್ನ ಹರಿದ್ವಾರದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ ನಡೆಸಿದರು. ಯೋಗ ಕಾರ್ಯಕ್ರಮದಲ್ಲಿ ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಭಾಗಿಯಾಗಿದ್ದಾರೆ.
ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಅಂತರಾಷ್ಟ್ರೀಯ ಯೋಗಾ ದಿನಾಚರಣೆ ನಡೆಯಿತು. ನಗರದ ನಂದಿಭವನ ದಲ್ಲಿ ನಡೆದ ಯೋಗ ದಿನಾಚರಣೆಗೆ ಜಿಲ್ಲಾಧಿಕಾರಿ ಡಿಎಸ.ರಮೇಶ ಹಾಗೂ ಎಡಿಸಿ ಕಾತ್ಯಾಯಿನಿದೇವಿ ವಿದ್ಯುಕ್ತವಾಗಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಡಿಸಿ ಡಿ.ಎಸ.ರಮೇಶ್ ಪ್ರತಿಯೊಬ್ಬರೂ ಬಿಡುವು ಮಾಡಿಕೊಂಡು ನಿಯಮಿತವಾಗಿ ಯೋಗಾಭ್ಯಾಸ ನಡೆಸಿದರೆ ಕುಟುಂಬದ ಎಲ್ಲಾ ಸದಸ್ಯರು ಆರೋಗ್ಯವಾಗಿರಬಹುದು ಎಂದು ತಿಳಿಸಿದರು. ನೆರೆದಿದ್ದ ನೂರಾರು ಯೋಗವಿದ್ಯಾರ್ಥಿಗಳಿಗೆ ಯೋಗ ಪಟುಗಳು ಯೋಗ ಬಂಗಿಗಳನ್ನು ತಿಳಿಸಿಕೊಟ್ಟರು. ಯೋಗ ದಿನಾಚರಣೆಯಲ್ಲಿ ಆಯುಷ್ ಇಲಾಖೆಯ ಅಧಿಕಾರಿ ಡಾ.ಸುಜಾತ,ಪಂಥಂಜಲಿ ಯೋಗ ಸಂಸ್ಥೆಯ ಅಧ್ಯಕ್ಷ ಹೆಚ್.ಜಿ.ಕುಮಾರ, ಯೋಗಗುರುಗಳಾದ ನಿಜಗುಣ ಅಜಿತ್ ಸೇರಿದಂತೆ ಯೋಗ ಪಟುಗಳು ಉಪಸ್ಥಿತರಿದ್ರು.
ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕುರಿತು ಸಿಎಂ ಟ್ವೀಟ್ ಮಾಡಿದ್ದಾರೆ. ಜಾತಿ, ಧರ್ಮ, ಪಂಥ, ಸಿದ್ಧಾಂತಗಳನ್ನು ತಳುಕುಹಾಕದೆ. ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ಯೋಗಾಭ್ಯಾಸ ಮಾಡೋಣ. ಸರ್ವರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು ಎಂದು ಟ್ವೀಟ್ ಮೂಲಕ ಸಿಎಂ ಸಿದ್ದರಾಮಯ್ಯ ಜನತೆಗೆ ಶುಭ ಕೋರಿದ್ದಾರೆ. ವಿಶ್ವ ಯೋಗ ದಿನ ಹಿನ್ನಲೆ ದೇಶಾದ್ಯಂತ ಯೋಗ ಮಾಡುವ ಮೂಲಕ ಭಾರತದ ಶಕ್ತಿಯನ್ನ ಜಗತ್ತಿಗೆ ತೋರಿಸಲಾಗ್ತಿದೆ. ಬೆಂಗಳೂರು, ಮೈಸೂರು, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆ ಯೋಗ ಮಾಡುವ ಮೂಲಕ ವಿಶ್ವ ಯೋಗಾ ದಿನವನ್ನ ಆಚರಿಸಲಾಗ್ತಿದೆ.