ಬೆಂಗಳೂರು: ಬೆಂಗಳೂರಿನಲ್ಲಿ ಇಂದು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಟೋ ಚಾಲಕರು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿರುವುದರಿಂದ ಆಟೋ ಸೇವೆ ವ್ಯತ್ಯಯ ಉಂಟಾಗಲಿದೆ. ಅಂದಾಜು 2 ಲಕ್ಷಕ್ಕೂ ಹೆಚ್ಚು ಆಟೋ ಚಾಲಕರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿರುವುದರಿಂದ ಪ್ರಯಾಣಿಕರು ಪರದಾಡುವ ಸಾಧ್ಯತೆ ಇದೆ.
ಆಟೋ ಚಾಲಕರಿಗೆ ನ್ಯಾಯ ಒದಗಿಸಬೇಕು, ಕಾನೂನು ಬಾಹಿರವಾಗಿ ಬೈಕ್ ಟ್ಯಾಕ್ಸಿಯಿಂದ ಆಟೋ ಚಾಲಕರಿಗೆ ಬಾಡಿಗೆ ಸರಿಯಾಗಿ ಸಿಗುತ್ತಿಲ್ಲ.
ನ್ಯಾಯಬದ್ಧವಾಗಿ ಸರ್ಕಾರಕ್ಕೆ ಕಳೆದ 60 ವರ್ಷಗಳಿಂದ ತೆರಿಗೆ ಕಟ್ಟುತ್ತಿದ್ದೇವೆ. ಆದರೆ, ಕಾನೂನುಬಾಹಿರವಾಗಿ ಬೈಕ್ ಟ್ಯಾಕ್ಸಿಗಳು ಸೇವೆ ನೀಡುತ್ತಿದ್ದರು ರಾಜ್ಯ ಸರ್ಕಾರ ಕ್ರಮಕೈಗೊಳ್ಳದೆ ಕಾರ್ಪೊರೇಟ್ ಕಂಪನಿಗಳ ಪರವಾಗಿ ನಿಂತಿದೆ. ಇದರಿಂದ ಆಟೋ ಚಾಲಕರ ಜೀವನ ದುಸ್ತರವಾಗಿದೆ. ಕೂಡಲೇ ಬೈಕ್ ಸೇವೆ ನೀಡುತ್ತಿರುವ ಕಂಪನಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಂಡು ಆಟೋ ಚಾಲಕರಿಗೆ ನ್ಯಾಯ ಒದಗಿಸಬೇಕು ಎಂದು ಬೆಂಗಳೂರು ಚಾಲಕರ ಸಂಘಟನೆಗಳ ಒಕ್ಕೂಟದ ಸಂಚಾಲಕ ಎಂ ಮಂಜುನಾಥ್ ಹೇಳಿದ್ದಾರೆ.