ವಿಜಯಪುರ: ವಿಧಾನಸಭಾ ಚುನಾವಣೆ ಟಿಕೆಟ್ ದೊರೆತಿಲ್ಲ ಎಂಬ ಕಾರಣಕ್ಕೆ ಬಿಜೆಪಿಗೆ ರಾಜೀನಾಮೆ ಸಲ್ಲಿಸಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಅಯೋಧ್ಯೆ, ಹಿಂದುತ್ವದ ಬಗ್ಗೆಯೆಲ್ಲಾ ಮಾತನಾಡುತ್ತಿದ್ದಿರಿ. ಬಿಜೆಪಿ ನಿಮ್ಮನ್ನು ಸಿಎಂ, ಡಿಸಿಎಂ ಅನ್ನಾಗಿ ಮಾಡಿತ್ತು. ಇಷ್ಟೆಲ್ಲಾ ಅನುಭವಿಸಿ ಈಗ ಕಾಂಗ್ರೆಸ್ ಗೆ ಹೋಗ್ತಿದ್ದಾರಲ್ಲ? ನಿಮ್ಗೆಲ್ಲಾ ಮಾನ, ಮರ್ಯಾದೆ, ಸ್ವಾಭಿಮಾನ ಅನ್ನುವುದು ಇದ್ಯಾ ಎಂದು ಪ್ರಶ್ನಿಸಿದರು.
ಈ ಬಾರಿ ರಾಜ್ಯದಲ್ಲಿ ಸ್ಪಷ್ಟ ಬಹುಮತದ ಸರಕಾರ ಬರುತ್ತದೆ. ಇವರು ಯಾರು ಹೋದ್ರೂ ಇಲ್ಲಿ ಯಾರ ಡೆಪಾಸಿಟ್ ಗೂ ತೊಂದರೆ ಆಗುವುದಿಲ್ಲ. ಪ್ರಾಮಾಣಿಕರಿಗೆ ಹೊಸ ಅವಕಾಶ ನೀಡಬೇಕೆಂಬ ಕಾರಣಕ್ಕೆ ಪಕ್ಷ ಈ ಬಾರಿ ನಿರ್ಣಯ ತೆಗೆದುಕೊಂಡಿದೆ. ಎಲ್ಲ ಕಸವನ್ನು, ವೇಸ್ಟ್ ಬಾಡಿಗಳನ್ನು ತೆಗೆದು ಸ್ವಚ್ಛವಾದ ಕರ್ನಾಟಕ ಕೊಡಲು ಬಿಜೆಪಿ ಗಟ್ಟಿ ನಿರ್ಣಯ ತೆಗೆದುಕೊಂಡಿದೆ.
ರಾಜ್ಯದಲ್ಲಿ ನಿಮ್ಮ ಅಧ್ಯಾಯ ಕೊನೆಯಾಗುತ್ತದೆ. ಏನೋ ದುಡುಕಿನಿಂದ ಈ ನಿರ್ಣಯ ಮಾಡಿದ್ದೀರಿ. ಹೀಗಾಗಿ ವಾಪಸ್ ಬನ್ನಿ. ನಮ್ಮ ಪ್ರಧಾನಿ, ಅಮಿತ್ ಶಾ, ಜೆಪಿ ನಡ್ಡಾ ಅವರು ಏನು ನಿರ್ಣಯ ತೆಗೆದುಕೊಂಡಿದ್ದಾರೋ ಅದಕ್ಕೆ ನಾವು ಬದ್ಧರಾಗೋಣ. ಈ ಪಕ್ಷದ ಋಣ ನಮ್ಮ ಮೇಲಿದೆ. ಉಪಕಾರ ಮಾಡಿದೆ. ಈ ರೀತಿ ಪಕ್ಷ ಬಿಡುವ ನಾಯಕರಿಗೆ ನಾನು ಸಲಹೆ ನೀಡುತ್ತಿದ್ದೇನೆ.
ಇನ್ನು ನನ್ನ ಹೆಣ ಕೂಡ ಬಿಜೆಪಿ ಕಚೇರಿ ಮುಂದೆ ಹೋಗೊಲ್ಲ ಎಂಬ ಲಕ್ಷ್ಮಣ ್ ಸವದಿ ಹೇಳಿಕೆಗೆ ಯತ್ನಾಳ್ ತಿರುಗೇಟು ನೀಡಿದ್ದಾರೆ. ಪಿ.ವಿ.ನರಸಿಂಹ ರಾವ್ ಪ್ರಧಾನಿಯಾಗಿದ್ದರು. ಅವರ ಹೆಣವೂ ಕಾಂಗ್ರೆಸ್ ಕಚೇರಿಗೆ ಬಂದಿರ್ಲಿಲ್ಲ. ಬಿಜೆಪಿ ಕಚೇರಿ ಮುಂದೆ ಯಾರದ್ದಾದರೂ ಹೆಣಗಳು ಬರುತ್ತವೆಯೇ? ಜೀವಂತ ಇದ್ದವರು ಬರುತ್ತಾರೆ. ಹೆಣಗಳು ನೇರ ಸ್ಮಶಾಸನಕ್ಕೆ ಹೋಗುತ್ತವೆ.