ಬಾಕು: ಕಝಕ್ಸ್ತಾನದ ಅಕ್ಟೌ ನಗರದ ಬಳಿ ಬುಧವಾರ ಪತನಗೊಂಡ ಅಝರ್ಬೈಝಾನ್ ಏರ್ಲೈನ್ಸ್ ವಿಮಾನಕ್ಕೆ ರಶ್ಯ ಪ್ರಯೋಗಿಸಿದ ಕ್ಷಿಪಣಿ ಆಕಸ್ಮಿಕವಾಗಿ ಅಪ್ಪಳಿಸಿರುವ ಸಾಧ್ಯತೆಯಿದೆ ಎಂದು ಮಿಲಿಟರಿ ತಜ್ಞರನ್ನು ಹೇಳಿದ್ದಾಗಿ ವರದಿಯಾಗಿದೆ.
ವಿಮಾನದಲ್ಲಿದ್ದ 62 ಪ್ರಯಾಣಿಕರು ಹಾಗೂ ಐವರು ಸಿಬ್ಬಂದಿಗಳಲ್ಲಿ 38 ಮಂದಿ ಮೃತಪಟ್ಟಿದ್ದು 29 ಮಂದಿ ಬದುಕುಳಿದಿದ್ದರು. ದುರಂತದ ಬಗ್ಗೆ ತನಿಖೆ ಮುಂದುವರಿದಿದ್ದು, ವಿಮಾನದ ಮೇಲ್ಮೈ ಹಾಗೂ ಬಾಲದ ಬಳಿ ಆಗಿರುವ ತೂತುಗಳು ಕ್ಷಿಪಣಿಯ ಚೂರಿನಿಂದ ಆಗುವ ರಂಧ್ರವನ್ನು ಹೋಲುತ್ತವೆ ಎಂದು ಮಿಲಿಟರಿ ತಜ್ಞರು ಹೇಳಿದ್ದಾಗಿ ವಾಲ್ಸ್ಟ್ರೀಟ್ ಜರ್ನಲ್, ಯುರೋ ನ್ಯೂಸ್ ಮತ್ತು ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿವೆ.
ದುರಂತ ಸಂಭವಿಸಿದ ಸಮಯದಲ್ಲಿ ಅಝರ್ಬೈಜಾನ್ ವಿಮಾನವು ಉಕ್ರೇನ್ನ ಡ್ರೋನ್ ದಾಳಿ ನಡೆದಿರುವ ಪ್ರದೇಶದಲ್ಲಿತ್ತು. ಒಂದು ವಾರದ ಹಿಂದೆ ಗ್ರೋಝ್ನಿ ಪ್ರದೇಶದಲ್ಲಿ ಉಕ್ರೇನ್ ಸರಣಿ ಡ್ರೋನ್ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಇಲ್ಲಿ ರಶ್ಯವು ವಾಯುಪ್ರದೇಶ ರಕ್ಷಣಾ ವ್ಯವಸ್ಥೆಯನ್ನು ನೆಲೆಗೊಳಿಸಿದೆ. ಇದು ಅಝರ್ಬೈಜಾನ್ನ ವಿಮಾನವನ್ನು ಉಕ್ರೇನ್ನ ವಿಮಾನವೆಂದು ತಪ್ಪಾಗಿ ಗ್ರಹಿಸಿ ವಿಮಾನ ಧ್ವಂಸಕ ಕ್ಷಿಪಣಿಯನ್ನು ಪ್ರಯೋಗಿಸಿರಬಹುದು ಎಂದು ಮತ್ತೊಂದು ವರದಿ ಹೇಳಿದೆ. ವಿಮಾನ ಪತನಗೊಳ್ಳುವುದಕ್ಕೂ ಮುನ್ನ ಭಾರೀ ಸ್ಫೋಟದ ಸದ್ದು ಕೇಳಿಸಿರುವುದಾಗಿ ವಿಮಾನದ ಪ್ರಯಾಣಿಕರು ಹೇಳಿದ್ದು ಇದು ವಿಮಾನದ ಆಮ್ಲಜನಕ ಟ್ಯಾಂಕ್ ಸ್ಪೋಟಿಸಿದ ಸದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ ಇದನ್ನು ರಶ್ಯ ಖಂಡಿಸಿದ್ದು, `ತನಿಖೆ ಪೂರ್ಣಗೊಳ್ಳುವ ತನಕ ನಾವು ಕಾಯಬೇಕಿದೆ. ಆಧಾರವಿಲ್ಲದ ವರದಿಯ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ’ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.