ಬೆಂಗಳೂರು: ಶಿಕ್ಷಣ ಇಲಾಖೆ ಮತ್ತು ಮಕ್ಕಳ ಕಲಿಕೆಯ ಬಗ್ಗೆ ಕಾಳಜಿ ತೋರಿಸಿ ಎಂದು ಸರ್ಕಾರಕ್ಕೆ ಪತ್ರ ಬರೆಯಲು ಮಾಜಿ ಸಚಿವ ಬಿಸಿ ನಾಗೇಶ್ ಗೆ ಯಾವ ನೈತಿಕತೆ ಇದೆ ಎಂದು ಖಾಸಗಿ ಶಾಲಾ ಒಕ್ಕೂಟ ಪ್ರಶ್ನಿಸಿದ್ದಾರೆ.
ಸೋತ ನಂತರ ಅವರಿಗೆ ಜವಾಬ್ದಾರಿ ಬಂದಿರುವುದು ವಿಶೇಷ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಟೀಕಿಸಿದ್ದಾರೆ.
ಶುಕ್ರವಾರ ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ಬಿ.ಸಿ. ನಾಗೇಶ್ ಕಾಲಾವಧಿಯಲ್ಲಿ ಪಠ್ಯ ಪರಿಷ್ಕರಣೆ ವಿವಾದ, ಹಿಜಾಬ್ ವಿವಾದ, ಖಾಸಗಿ ಶಾಲೆಗಳ ವಿರುದ್ಧ ದ್ವೇಷ ಮತ್ತಿತರ ವಿವಾದಗಳು ಸೃಷ್ಟಿಯಾಗಿದ್ದವು. ಆದರೆ ಆಗ ಅವರು ಯಾವುದೇ ರೀತಿಯಲ್ಲಿ ಮಕ್ಕಳ ಪರ ತೀರ್ಮಾನ ತೆಗೆದುಕೊಂಡಿಲ್ಲ. ಈಗ ಪತ್ರವನ್ನು ಬರೆಯಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.