ಹೈದರಾಬಾದ್: ಕೊನೆಯ ಓವರ್ನಲ್ಲಿ 20 ರನ್ಗಳು ಅಗತ್ಯವಿದ್ದಾಗ ಕೇವಲ ಐದು ರನ್ಗಳಿಗೆ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ನಿಯಂತ್ರಿಸಿದ ಮುಂಬೈ ಇಂಡಿಯನ್ಸ್ ಆಲ್ರೌಂಡರ್ ಅರ್ಜುನ್ ತೆಂಡೂಲ್ಕರ್, 20ನೇ ಓವರ್ನಲ್ಲಿ ತಾವು ರೂಪಿಸಿದ್ದ ಬೌಲಿಂಗ್ ಪ್ಲಾನ್ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ.
ಬುಧವಾರ ನಡೆದಿದ್ದ ಮುಂಬೈ ಇಂಡಿಯನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯ ಅಂತಿಮ ಓವರ್ವರೆಗೂ ತೀವ್ರ ಕುತೂಹಲದಿಂದ ಕೂಡಿತ್ತು. ಅದರಂತೆ ಅಂತಿಮ ಓವರ್ನಲ್ಲಿ ಸನ್ರೈಸರ್ಸ್ ತಂಡಕ್ಕೆ 20 ರನ್ಗಳು ಅಗತ್ಯವಿದ್ದಾಗ ಅರ್ಜುನ್ ತೆಂಡೂಲ್ಕರ್ ಅವರು ಲೆಗ್ ಬೈಸ್ ಸೇರಿ ಕೇವಲ 5 ರನ್ ಕೊಡುವ ಜೊತೆಗೆ ಚೊಚ್ಚಲ ವಿಕೆಟ್ ಕಬಳಿಸಿದ್ದರು. ಆ ಮೂಲಕ ಮುಂಬೈ ಇಂಡಿಯನ್ಸ್ ತಂಡದ 14 ರನ್ಗಳ ಗೆಲುವಿಗೆ ನೆರವಾದರು.
20ನೇ ಓವರ್ ಮೊದಲನೇ ಎಸೆತದಲ್ಲಿ ರನ್ ನೀಡದ ಅರ್ಜುನ್ ತೆಂಡೂಲ್ಕರ್, ಎರಡನೇ ಎಸೆತದಲ್ಲಿ ಒಂದು ರನ್ ಓಡಿದರೂ ಅಬ್ದುಲ್ ಸಮದ ರನ್ ಔಟ್ ಆದರು. ನಂತರ ಮೂರನೇ ಎಸೆತದಲ್ಲಿ ವೈಡ್ ಹಾಕಿದ ಅವರು, ನಂತರ ಎರಡು ರನ್ ಕೊಟ್ಟರು. ಇನ್ನು ನಾಲ್ಕನೇ ಎಸೆತದಲ್ಲಿ ಎಸ್ಆರ್ಎಚ್ ಲೆಗ್ ಬೈಸ್ ರೂಪದಲ್ಲಿ ಒಂದು ರನ್ ಪಡೆಯಿತು ಹಾಗೂ ಐದನೇ ಎಸೆತದಲ್ಲಿ ಅರ್ಜುನ್ ತೆಂಡೂಲ್ಕರ್ ಅವರು ಭುವನೇಶ್ವರ್ ಕುಮಾರ್ ಅವರನ್ನು ಔಟ್ ಮಾಡಿದರು. ಅಂತಿಮವಾಗಿ ಕೇವಲ 4 ರನ್ಗಳಿಗೆ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಅರ್ಜುನ್ ನಿಯಂತ್ರಿಸಿದರು. ಅಂತಿಮವಾಗಿ ಹೈದರಾಬಾದ್ ತಂಡ 178 ರನ್ಗಳಿಗೆ ಆಲ್ಔಟ್ ಆಯಿತು.
ಈ ಪಂದ್ಯದಲ್ಲಿ ಒಟ್ಟು 2.5 ಓವರ್ ಬೌಲ್ ಮಾಡಿದ ಅರ್ಜುನ್ ತೆಂಡೂಲ್ಕರ್ ಅವರು 18 ರನ್ ನೀಡಿ ಒಂದು ವಿಕೆಟ್ ಕಬಳಿಸಿದರು. ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಅವರು, “ಮೊದಲನೇ ಐಪಿಎಲ್ ವಿಕೆಟ್ ಕಬಳಿಸಿರುವುದಕ್ಕೆ ಖುಷಿಯಾಗುತ್ತಿದೆ. ನನ್ನ ನಿಯಂತ್ರಣದಲ್ಲಿ ಏನಿದೆ ಅದರ ಮೇಲೆ ಮಾತ್ರ ಗಮನಹರಿಸಿದ್ದೇನೆ. ನನ್ನ ಪ್ಲಾನ್ ಅನ್ನು ಇಲ್ಲಿ ಕಾರ್ಯಗತಗೊಳಿಸಿದ್ದೇನೆ ಅಷ್ಟೆ,” ಎಂದು ಹೇಳಿದರು.
“ವೈಡ್ ಯಾರ್ಕರ್ ಹಾಕವುದು ನಮ್ಮ ಯೋಜನೆಯಾಗಿತ್ತು ಹಾಗೂ ಲಾಂಗ್ ಬೌಂಡರಿ ಇರುವ ಕಡೆಗೆ ಬ್ಯಾಟ್ಸ್ಮನ್ ಅನ್ನು ಆಡಲು ಉತ್ತೇಜಿಸುವುದು ಇದಾಗಿತ್ತು. ಹಾಗಾಗಿ ವೈಡ್ ಯಾರ್ಕರ್ಗಳನ್ನು ಹಾಕಲು ಪ್ರಯತ್ನಿಸಿದೆ. ಅದರಂತೆ ನಮ್ಮ ಯೋಜನೆ ಸಕಾರವಾಯಿತು,” ಎಂದು ಮರಿ ತೆಂಡೂಲ್ಕರ್ ತಿಳಿಸಿದ್ದಾರೆ.