ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಹುಲಿ ಯೋಜನೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ(ಏ.9) ಬಂಡೀಪುರಕ್ಕೆ ಭೇಟಿ ನೀಡಲಿದ್ದಾರೆ.
ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಈಗಾಗಲೇ ಬಂಡೀಪುರದಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಅಲ್ಲದೇ ಇಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ಹಾಗೂ ಸಫಾರಿಯನ್ನು ನಿಷೇಧ ಮಾಡಲಾಗಿದೆ. ಜೊತೆಗೆ ಎಲ್ಲ ರೀತಿಯ ಡ್ರೋನ್ ಹಾರಾಟಕ್ಕೂ ಕಡಿವಾಣ ಹಾಕಲಾಗಿದೆ. ಮೇಲು ಕಾಮನಹಳ್ಳಿಯ ಸಫಾರಿ ಕೌಂಟರ್ ಸಮೀಪವೇ ಮೂರು ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಶನಿವಾರ ರಾತ್ರಿ ಮೈಸೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ ಮೈಸೂರಿನ ರ್ಯಾಂ ಡಿಸನ್ ಬ್ಲೂ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಏ.9 ರಂದು ಬೆಳಗ್ಗೆ 6.30ಕ್ಕೆ ಮೈಸೂರು ವಿಶೇಷ ಹೆಲಿಪ್ಯಾಡ್ನಿಂದ ಹೆಲಿಕಾಪ್ಟರ್ ಮೂಲಕ ಬಂಡೀಪುರದ ಮೇಲುಕಾಮನಹಳ್ಳಿಗೆ ಆಗಮಿಸಲಿದ್ದಾರೆ. ಹೆಲಿಪ್ಯಾಡ್ನಿಂದ ಕಾರಿನಲ್ಲಿ ಬಂಡೀಪುರಕ್ಕೆ ತೆರಳಿ ಸಫಾರಿ ಮಾಡಲಿದ್ದು ಬಳಿಕ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಲಿದ್ದಾರೆ. ಮೋದಿ ಸಫಾರಿ ಮಾಡಲಿರುವ ವಾಹನವನ್ನು ಸಜ್ಜುಗೊಳಿಸಲಾಗಿದೆ.
ನಂತರ ರಸ್ತೆ ಮಾರ್ಗವಾಗಿ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶಕ್ಕೆ ತೆರಳಿ ಆಸ್ಕರ್ ವಿಜೇತ ದಿ ಎಪಿಫಂಟ್ ವಿಸ್ಪರಸ್ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕಾವಾಡಿ ದಂಪತಿ ಬೊಮ್ಮನ್ ಹಾಗೂ ಬೆಳ್ಳಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ನಲ್ಲಿ ಮೈಸೂರಿಗೆ ತೆರಳಿ ಕೆಎಸ್ಒಯುನ ಘಟಿಕೋತ್ಸವ ಭವನದಲ್ಲಿ ನಡೆಯುವ ಬಂಡೀಪುರ ಹುಲಿ ಯೋಜನೆ 50 ವರ್ಷದ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಂಡೀಪುರಕ್ಕೆ ಮೋದಿ ಭೇಟಿ ಹಿನ್ನೆಲೆಯಲ್ಲಿ ಎಸ್ಪಿಜಿ ಅಧಿಕಾರಿಗಳು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ.
ವರದಿ: ಪ್ರಮೋದ್ ಆರ್, ಚಾಮರಾಜನಗರ