ದೆಹಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಚರ್ಚಿಸಿದ್ದಾರೆ. ಲೋಕ ಕಲ್ಯಾಣ ಮಾರ್ಗ್ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಜೊತೆಗೆ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯ ಬಗ್ಗೆ ಸುಮಾರು 5 ಗಂಟೆಗಳ ಸುದೀರ್ಘ ಸಭೆ ನಡೆದಿದೆ ಎನ್ನಲಾಗಿದೆ. ಮುಂಬರುವ ದಿನಗಳಲ್ಲಿ ಹೊಸ ಕಾನೂನು ಜಾರಿಗೆ ತರುವುದು ಹೇಗೆ? ಇದಕ್ಕೆ ಬರಬಹುದಾದ ವಿರೋಧಗಳೇನು? ಮತ್ತು ಇದು ಮುಂಬರುವ ಚುನಾವಣೆಗಳಿಗೆ ಎಷ್ಟು ಪ್ರಮಾಣದಲ್ಲಿ ಲಾಭವಾಗಲಿದೆ ಎಂಬುವುದನ್ನು ವಿಮರ್ಶಿಸಲಾಗಿದೆ.
ಏಕರೂಪ ನಾಗರಿಕ ಸಂಹಿತೆ ಜಾರಿಗೆ ಪ್ರಧಾನಿ ನರೇಂದ್ರ ಮೋದಿ ಉತ್ಸುಕರಾಗಿದ್ದಾರೆ. ಇತ್ತೀಚೆಗೆ ಭೋಪಾಲ್ನಲ್ಲಿ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಂವಾದದಲ್ಲಿ ಮಾತನಾಡಿದ ಅವರು, ಹೊಸ ಕಾನೂನು ಮುಂದಿಟ್ಟುಕೊಂಡು ಕೆಲ ಸಮುದಾಯಗಳನ್ನು ಎತ್ತಿಕಟ್ಟುವ ಪ್ರಯತ್ನ ನಡೆಯುತ್ತಿದೆ. ನಮ್ಮ ವಿರುದ್ಧ ಒಟ್ಟಾಗಿರುವ ಪ್ರತಿ ನಾಯಕರು ಲಕ್ಷ ಕೋಟಿ ಹಗರಣ ಗ್ಯಾರಂಟಿ ನೀಡುತ್ತದೆ ಎಂದು ಹರಿಹಾಯ್ದಿದ್ದರು