ಅಯೋಧ್ಯೆ: ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನಾ ಮಹೋತ್ಸವಕ್ಕೆ ಗಂಟೆಗಳ ಎಣಿಕೆ ಆರಂಭವಾಗಿದೆ. ಈ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಈಗಾಗಲೇ ಅಯೋಧ್ಯೆಗೆ ದೇಶದ ಗಣ್ಯಾತಿಗಣ್ಯರು ಆಗಮಿಸ್ತಿದ್ದಾರೆ. ಭಾನುವಾರ ಗಣ್ಯರ ಆಗಮನದ ಸಂಖ್ಯೆ ಇನ್ನೂ ಹೆಚ್ಚಲಿದೆ. ಈ ಹೊತ್ತಲ್ಲಿ ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ರಾಮಮಂದಿರ ಕಾರಣಕ್ಕಾಗಿ ಅಯೋಧ್ಯೆ ನಗರಿ ದೇಶದ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ. ದೇಶ-ವಿದೇಶಗಳ 11 ಸಾವಿರ ವಿವಿಐಪಿಗಳು ರಾಮನೂರಿಗೆ ಆಗಮಿಸುವ ಕಾರಣ ಗರಿಷ್ಠ ಭದ್ರತೆ ಒದಗಿಸಲಾಗಿದೆ. ಭೂಮಿ, ನೀರು, ವಾಯುಪ್ರದೇಶದಲ್ಲಿ ತೀವ್ರ ನಿಗಾ ಇರಿಸಲಾಗಿದೆ.
ಅಯೋಧ್ಯೆ ಮೇಲೆ ದಾಳಿ ನಡೆಸೋದಾಗಿ ಖಲಿಸ್ಥಾನ್ ಉಗ್ರ ಪನ್ನೂನ್ ಎಚ್ಚರಿಕೆ ಮೇಲೆ ಎಚ್ಚರಿಕೆ ನೀಡ್ತಿದ್ದಾನೆ. ಇದರ ಜೊತೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಷ್ ದಾಳಿ ನಡೆಸುವ ಸಂಭವ ಇದೆ ಎಂದು ಗುಪ್ತಚರ ಪಡೆಗಳು ಎಚ್ಚರಿಸಿವೆ. ಹೀಗಾಗಿ ಅಯೋಧ್ಯೆಯಲ್ಲಿ ಗರಿಷ್ಠ ಮಟ್ಟದ ಮಟ್ಟದ ನಿಗಾ ವಹಿಸಲಾಗಿದೆ. ರಾಮಮಂದಿರದ ಬಳಿ ಮೂರು ಹಂತದ ಭದ್ರತೆ ಏರ್ಪಾಟು ಮಾಡಲಾಗಿದೆ.
ಅಯೋಧ್ಯಾ ನಗರಿಯಲ್ಲಿ ಭದ್ರತಾ ಪಡೆಗಳ ಪ್ಯಾಟ್ರೋಲಿಂಗ್ ಹೆಚ್ಚಿದೆ. ಸರಯೂ ನದಿಯಲ್ಲಿ ಸೆಕ್ಯೂರಿಟಿ ಬೋಟ್ಗಳು ಸಂಚರಿಸ್ತಿವೆ. ಡ್ರೋನ್ಗಳ ಮೂಲಕ ವೈಮಾನಿಕ ನಿಗಾ ಕೂಡ ಇರಿಸಲಾಗಿದೆ. ಅಯೋಧ್ಯೆ ನಗರಿಯ ಮುಖ್ಯ ವೃತ್ತ ಲತಾ ಮಂಗೇಷ್ಕರ್ ವೃತ್ತವಂತೂ ಭಯೋತ್ಪಾದನಾ ನಿಗ್ರಹ ದಳದ ಕಮಾಂಡೋಗಳಿಂದ ತುಂಬಿ ಹೋಗಿದೆ. ಎಲ್ಲರ ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ.
ನಿಗಾ ನೆರಳಿನಲ್ಲಿ ರಾಮಮಂದಿರ: ಪ್ರಧಾನಿ ಭದ್ರತಾ ಕರ್ತವ್ಯಕ್ಕೆ ಎಸ್ಪಿಜಿ ಸಿಬ್ಬಂದಿ, 100 ಮಂದಿಯ ಎಸ್ಎಸ್ಎಫ್ ಕಮಾಂಡೋ ಪಡೆ, ಮಂದಿರ ಪರಿಸರದಲ್ಲಿ ಒಟ್ಟು 1,400 ಎಸ್ಎಸ್ಎಫ್ ಗಸ್ತು, ಮಂದಿರ ಹೊರಗೆ ಸಿಆರ್ ಪಿಎಫ್ ಯೋಧರ ಭದ್ರತೆ ಒದಗಿಸಲಾಗಿದೆ. ಮಂದಿರ ಹೊರಗಿನ ರೆಡ್ ಝೋನ್ನಲ್ಲಿ ಪಿಎಸಿ, ಸಿವಿಲ್ ಪೊಲೀಸ್,
ಅಯೋಧ್ಯೆಯಲ್ಲಿ ಒಟ್ಟು 25 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಡ್ರೋನ್, ಸಿಸಿಟಿವಿ, ಎಐ ತಂತ್ರಜ್ಞಾನದ ಮೂಲಕ ನಿಗಾ ಇರಿಸಲಾಗಿದೆ. ಒಟ್ಟಿನಲ್ಲಿ ಯಾರಿಗೂ ಏನು ತೊಂದ್ರೆ ಆಗಬಾರದು. ಎಲ್ಲಾ ಸಾಂಗವಾಗಿ ನೆರವೇರಬೇಕು ಎಂಬಂತೆ ಸಿದ್ದತೆಗಳು ನಡೆದಿವೆ. ರಾಮಮಂದಿರದ ಬಗ್ಗೆ ತಪ್ಪು ಮಾಹಿತಿ ಹಬ್ಬಿಸಿದ್ರೆ ಜೈಲು ಗ್ಯಾರಂಟಿ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.