ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ, ನಿರ್ಮಾಪಕ ಹಾಗೂ ನಿರ್ದೇಶಕ ದ್ವಾರಕೀಶ್ ಇಂದು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿವಾಸದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ನಾಳೆ ಬೆಳಗ್ಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತಿದೆ. ದ್ವಾರಕೀಶ್ ನಿಧನದ ಹಿನ್ನಲೆಯಲ್ಲಿ ನಾಳೆ ಒಂದು ದಿನ ಕನ್ನಡ ಚಿತ್ರರಂಗದ ಎಲ್ಲಾ ಕಾರ್ಯವನ್ನು ಬಂದ್ ಮಾಡಿ, ಸಂತಾಪ ಸೂಚಿಸೋ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಬಗ್ಗೆ ಮಾತನಾಡಿದ ಫಿಲ್ಮಂ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್, ದ್ವಾರಕೀಶ್ ಚಿತ್ರರಂಗದ ದೊಡ್ಡ ಆಸ್ತಿ. ಅವರ ಅಗಲಿಕೆ ಎಲ್ಲರಿಗೂ ತುಂಬಾ ನೋವಾಗಿದೆ. ಅವರು ಕೇವಲ ನಟರಲ್ಲ ನಿರ್ದೇಶಕ, ನಿರ್ಮಾಪಕ ಕೂಡ ಹೌದು. ಹಾಗಾಗಿ ನಾಳೆ ಚಿತ್ರರಂಗ ಬಂದ್ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ನಾಳೆ ಸ್ವಯಂಪ್ರೇರಿತವಾಗಿ ಬಂದ್ ಮಾಡಬೇಕು ಅಂತ ಕೇಳಿಕೊಳ್ತೀನಿ ಎಂದಿದ್ದಾರೆ.
ನಟ ದ್ವಾರಕೀಶ್ ಅವರ ಅಂತ್ಯಕ್ರಿಯೆ ಬಗ್ಗೆ ಸರ್ಕಾರದ ಜೊತೆ ಮಾತನಾಡ್ತಿದ್ದೇವೆ. ಅವರನ್ನು ಗೌರವಪೂರ್ವಕವಾಗಿ ಕಳುಹಿಸಿಕೊಡಬೇಕಿದೆ. ಆ ಕೆಲವನ್ನು ಸರ್ಕಾರ ಮಾಡೋ ನಿರೀಕ್ಷೆಯಿದೆ ಎಂದು ಎನ್ ಎಂ ಸುರೇಶ್ ಹೇಳಿದ್ದಾರೆ.