ಚಿತ್ರದುರ್ಗದ ರೇಣುಕಾ ಸ್ವಾಮಿ ಅವರನ್ನು ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡಿದ ಬಳಿಕ 17 ಮಂದಿ ಜೈಲು ಸೇರಿದ್ದಾರೆ. ಇಷ್ಟು ದಿನಗಳ ಕಾಲ ಯಾರು ಜಾಮೀನಿಗೆ ಅರ್ಜಿ ಸಲ್ಲಿಸಿರಲಿಲ್ಲ. ಇದೀಗ ಕೊಲೆ ನಡೆದ ಬಳಿಕ ಮೊದಲು ಪೊಲೀಸರ ಮುಂದೆ ಶರಣಾಗಿದ್ದ 17ನೇ ಆರೋಪಿ ನಿಖಿಲ್ ನಾಯಕ್ ಜಾಮೀನಿಗೆ ಅರ್ಜಿ ಹಾಕಿದ್ದಾನೆ.
ರೇಣುಕಾಸ್ವಾಮಿ ಕೊಲೆಯ 17 ಆರೋಪಿಗಳ ಪೈಕಿ ನಿಖಿಲ್ ನಾಯಕ್ ಪರ ವಕೀಲರು ಸಿಟಿ ಸಿವಿಲ್ ಕೋರ್ಟ್ನ 57ನೇ ಸೆಷನ್ಸ್ ಕೋರ್ಟ್ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಬನ್ನೇರುಘಟ್ಟ ರಸ್ತೆ ಕೆಂಬತ್ತಹಳ್ಳಿ ನಿವಾಸಿ ನಿಖಿಲ್ ನಾಯಕ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ. ರೇಣುಕಾಸ್ವಾಮಿ ಕೊಲೆ ಬಳಿಕ ಪಟ್ಟಣಗೆರೆ ಶೆಡ್ನಿಂದ ಮೃತದೇಹವನ್ನು ಸಾಗಿಸಿದ್ದ ಆರೋಪ ಈತನ ಮೇಲಿದೆ.
ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಅದರಲ್ಲಿ ನಿಖಿಲ್ ನಾಯಕ್ ಸೇರಿ ರವಿಶಂಕರ್, ಕಾರ್ತಿಕ್, ಕೇಶವ್ ತುಮಕೂರು ಜೈಲಿಗೆ ಸ್ಥಳಾಂತರಗೊಂಡಿದ್ದರು.
ಕೊಲೆ ನಡೆದ ಬಳಿಕ ಮೊದಲು ಪೊಲೀಸರ ಮುಂದೆ ಕಾರ್ತಿಕ್, ಕೇಶವ್ ಮತ್ತು ನಿಖಿಲ್ ಶರಣಾಗಿದ್ದರು. ಈ ಮೂವರು ಕೊಲೆ ಬಗ್ಗೆ ಸಂಪೂರ್ಣವಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದರು. ಇದರಿಂದ ದರ್ಶನ್ ಮತ್ತು ಗ್ಯಾಂಗ್ ಅರೆಸ್ಟ್ ಆಗಿತ್ತು. ಒಂದೇ ಜೈಲಿನಲ್ಲಿದ್ದರೇ ಅವರವರೇ ಹೊಡೆದಾಡಿಕೊಳ್ಳುವ ಸಾಧ್ಯತೆ ಇದ್ದು, ನಾಲ್ವರು ಆರೋಪಿಗಳ ಜೀವಕ್ಕೆ ಅಪಾಯ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲು ಕ್ರಮ ಕೈಗೊಳ್ಳಲಾಗಿತ್ತು. ಇದೀಗ ನಿಖಿಲ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ನ್ಯಾಯಾಧೀಶರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.