ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್ಡಿಎಲ್) ಅಧ್ಯಕ್ಷರಾಗಿದ್ದಾಗ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು ಮಂಜೂರಾಗಿದೆ.
ಶಾಸಕ ವಿರೂಪಾಕ್ಷಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ನ್ಯಾ. ಜಯಂತ್ ಕುಮಾರ್ ಅವರು ಈ ಆದೇಶ ಹೊರಡಿಸಿದ್ದಾರೆ. 5 ಷರತ್ತುಗಳನ್ನ ವಿಧಿಸಿ ಜಾಮೀನು ನೀಡಲಾಗಿದೆ.
ಲಂಚ ಪಡೆದ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಈಚೆಗೆ ಬಂಧಿಸಿದ್ದರು. ನಂತರ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ವಿರೂಪಾಕ್ಷಪ್ಪ ಜೊತೆ ಅವರ ಪುತ್ರ ಪ್ರಶಾಂತ್ ಮಾಡಾಳ್, ಅವರ ಖಾಸಗಿ ಕಚೇರಿಯ ಅಕೌಂಟೆಂಟ್ ಸುರೇಂದ್ರ, ಚಿತ್ರದುರ್ಗದ ಭೀಮಸಂದ್ರ ನಿವಾಸಿ ಸಿದ್ದೇಶ್, ಬೆಂಗಳೂರಿನ ಕರ್ನಾಟಕ ಅರೋಮಾಸ್ ಕಂಪನಿಯ ನೌಕರರಾದ ಆಲ್ಬರ್ಟ್ ನಿಕೋಲಸ್ ಮತ್ತು ಗಂಗಾಧರ ಅವರನ್ನು ಕೆಎಸ್ಡಿಎಲ್ ಕಚ್ಚಾವಸ್ತು ಪೂರೈಕೆಯಲ್ಲಿನ ಲಂಚ ಪ್ರಕರಣದಲ್ಲಿ ಮಾರ್ಚ್ 2ರಂದು ಬಂಧಿಸಲಾಗಿತ್ತು. ಅವರೆಲ್ಲರೂ ಈವರೆಗೂ ನ್ಯಾಯಾಂಗ ಬಂಧನದಲ್ಲಿದ್ದಾರೆ.