ಬೆಂಗಳೂರು: ಓಲಾ, ಊಬರ್ ಆಯ್ತು ಇದೀಗ ಬೆಂಗಳೂರಿನಲ್ಲಿ ಇಂದಿನಿಂದ ಮತ್ತೊಂದು ಟ್ಯಾಕ್ಸಿ ಸರ್ವೀಸ್ ರೋಡಿಗೆ ಬಂದಿದೆ. ಹೌದು ಆಟೊ ರಿಕ್ಷಾದಂತೆ ಪ್ರಯಾಣಿಕ ಸೇವೆ ಒದಗಿಸಲು ನಾಲ್ಕು ಚಕ್ರದ ‘ಕ್ಯೂಟ್ ಕ್ವಾಡ್ರಿ ಸೈಕಲ್’ ವಾಹನಗಳು ನಗರದಲ್ಲಿ ಇಂದಿನಿಂದ ಅಧಿಕೃತವಾಗಿ ರಸ್ತೆಗೆ ಇಳಿದಿವೆ.
ಈ ವಾಹನಗಳಿಗೆ ಸಾರಿಗೆ ಇಲಾಖೆ ಪ್ರತ್ಯೇಕ ದರ ನಿಗದಿ ಮಾಡಿದೆ. ನಾಲ್ಕು ಚಕ್ರದ ವಾಹನಗಳು ಮೀಟರ್ ಆಳವಡಿಕೆಯೊಂದಿಗೆ ರೋಡಿಗೆ ಇಳಿದಿದ್ದು, ಬಜಾಜ್ ಕಂಪನಿ ಮುಖ್ಯಸ್ಥರು ವಾಹನಗಳಿಗೆ ಇಂದು ಚಾಲನೆ ನೀಡಿದ್ದಾರೆ.
ಇದರೊಂದಿಗೆ ನಗರದ ಜನತೆ ಆಟೊ ಮಾದರಿಯಲ್ಲಿರುವ ಈ ವಾಹನದಲ್ಲಿ ಕುಳಿತು ಪ್ರಯಾಣಿಸಬಹುದಾಗಿದೆ. ಈ ವಾಹನಗಳ ಕಾರ್ಯಾಚರಣೆಗೆ ತಿಂಗಳ ಹಿಂದೆಯೇ ಸಾರಿಗೆ ಇಲಾಖೆ ಅನುಮತಿ ನೀಡಿ ದರ ನಿಗದಿಪಡಿಸಿತ್ತು, 4 ಕಿ.ಮೀ ವರೆಗೆ 60 ರೂ. ಕನಿಷ್ಠ ದರವಿರಲಿದೆ. ನಂತರ ಪ್ರತಿ ಕಿಲೋ ಮೀಟರ್ಗೆ 16 ರೂ. ಇರಲಿದೆ ಎಂದು ಸಾರಿಗೆ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.
ಕಾರು ಮಾದರಿಯ ಬಜಾಜ್ ಕ್ಯೂಟ್ ಕ್ವಾಡ್ರಿ ಸೈಕಲ್ ವಾಹನವು 2019 ರಲ್ಲಿಯೇ ಮಾರುಕಟ್ಟೆಗೆ ಬಂದಿತ್ತು. ಆದರೆ ಸಾರಿಗೆ ಇಲಾಖೆ ದರ ನಿಗದಿ ಪಡಿಸಿರಲಿಲ್ಲ. ಆದ್ದರಿಂದ ಈ ವಾಹನಗಳು ರಸ್ತೆಗೆ ಈಳಿಯುವುದು ವಿಳಂಬವಾಗಿತ್ತು ಎನ್ನಲಾಗಿದೆ. ಸರ್ಕಾರ ಕಳೆದ ತಿಂಗಳು ದರ ನಿಗದಿ ಮಾಡಿದ್ದು, ಸೇವೆಗೆ ಅನುಮತಿ ನೀಡಿದ ಬೆನ್ನಲ್ಲೇ ಬಜಾಜ್ ಕ್ಯೂಟ್ ಕ್ವಾಡ್ರಿ ಸೈಕಲ್ ಟ್ಯಾಕ್ಸಿಗಳು ಇಂದಿನಿಂದ ಸೇವೆಗೆ ಸಜ್ಜಾಗಿವೆ.