ಬೆಂಗಳೂರು: ಬಜರಂಗ ದಳಕ್ಕೂ ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ(Randeep Singh Surjewala) ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಾತನಾಡಿದ ಅವರು, ಹನುಮಾನ್ ಚಾಲೀಸಾ ಪಠಿಸುತ್ತೇವೆ ಎನ್ನುತ್ತಿರುವ ಬಿಜೆಪಿ(BJP)ಯವರಿಗೆ ಹನುಮಾನ್ ಚಾಲೀಸಾ ಪಠಣೆ ಗೊತ್ತಿಲ್ಲ. ಅವರಿಗೆ ಗೊತ್ತಿರುವುದು ಚಾಲೀಸ್ ಪರ್ಸೆಂಟೇಜ್ ಪಡೆಯುವುದು ಮಾತ್ರ. ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ರಾಜ್ಯದಲ್ಲಿ 1500 ದೇವಾಲಯ ಕೆಡವಿದೆ.
ಹೀಗಿದ್ದರೂ ಈಗ ಮಾತನಾಡುತ್ತಿರುವವರು ಯಾಕೆ ಪ್ರತಿಭಟನೆ ಮಾಡಲಿಲ್ಲ?’ ಎಂದು ಕಿಡಿಕಾರಿದರು. ಬಿಜೆಪಿಯು ಕಳೆದ 4 ವರ್ಷದಲ್ಲಿ ಅತ್ಯಂತ ಪುರಾತನ ಹನುಮ ದೇವಾಲಯಗಳನ್ನು ಕೆಡವಿದೆ. ನಂಜನಗೂಡಿನಲ್ಲಿ ಸಾವಿರಾರು ವರ್ಷ ಇತಿಹಾಸದ ಹನುಮಂತನ ದೇವಾಲಯ ಕೆಡವಿದೆ. ಇದರ ವಿರುದ್ಧ ವಿಎಚ್ಪಿ, ಬಜರಂಗ ದಳ ಯಾಕೆ ವಿರೋಧಿಸಲಿಲ್ಲ? ಬೆಂಗಳೂರಿನಲ್ಲಿ ಮೆಟ್ರೋ ನಿರ್ಮಾಣಕ್ಕೆ ಯಡಿಯೂರಪ್ಪ, ಬೊಮ್ಮಾಯಿ ಅವರು 2020ರಲ್ಲಿ 150 ವರ್ಷಗಳ ಹಳೆಯ ಹನುಮಂತನ ದೇವಾಲಯ ಕೆಡವಿದ್ದರು. ಇದರ ಬಗ್ಗೆ ಬಜರಂಗ ದಳ ಹೋರಾಟ ಮಾಡಿತ್ತೇ? ಆಗ ಹನುಮಾನ್ ಚಾಲೀಸಾ ಪಠಿಸಲಾಗಿತ್ತೇ? ಎಂದು ಪ್ರಶ್ನಿಸಿದರು.
ಅಭಿವೃದ್ಧಿ ವಿಚಾರಗಳ ಚರ್ಚೆ ಬಿಟ್ಟು ಕೀಳುಮಟ್ಟಕ್ಕೆ ಇಳಿದು ಮಾತನಾಡುತ್ತಿರುವ ನರೇಂದ್ರ ಮೋದಿ ಅವರೇ, ಬಜರಂಗ ದಳವನ್ನು ಹನುಮಂತನಿಗೆ ಹೋಲಿಕೆ ಮಾಡುವುದು ಹನುಮಂತನಿಗೆ ಮಾಡಬಹುದಾದ ದೊಡ್ಡ ಅಪಮಾನ ಎಂಬುದು ನಿಮಗೆ ಗೊತ್ತಿಲ್ಲವೇ? ಹನುಮಂತ ಕರ್ತವ್ಯ ನಿಷ್ಠೆ, ಸೇವೆ, ತ್ಯಾಗಕ್ಕೆ ಪ್ರತೀಕ. ಇಂತಹ ಹನುಮಂತನನ್ನು ಹಿಂಸಾಚಾರ ಮಾಡುವವರ ಜತೆ ಹೋಲಿಕೆ ಮಾಡುವುದು ಹನುಮಂತನಿಗೆ ಮಾಡುವ ಅಗೌರವ. ಇದರಿಂದ ಕೋಟ್ಯಂತರ ಹನುಮ ಭಕ್ತರಿಗೆ ನೋವಾಗಿದೆ. ಹೀಗಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.